ಕನ್ನಡ ಚಿತ್ರರಂಗದಲ್ಲಿ (Sandalwood) ಬೇರೆ ಬೇರೆ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಅಂಥ ಡಿಫರೆಂಟ್ ಪ್ರಯತ್ನ ಯಾವಾಗಲೂ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಈಗ ‘ಫ್ಯಾಮಿಲಿ ಡ್ರಾಮಾ’ (Family Drama) ಚಿತ್ರತಂಡ ತಮ್ಮ ಹೊಸ ಬಗೆಯ ಕಹಾನಿ ಮತ್ತು ಟ್ರೇಲರ್ ಮೂಲಕ ಸುದ್ದಿ ಆಗುತ್ತಿದೆ. ಇದೊಂದು ಹೊಸಬರ ತಂಡ ಮಾಡಿದ ಸಿನಿಮಾ. ಅದೇ ಕಾರಣಕ್ಕೆ ಇದರಲ್ಲಿ ಹೊಸತನ ಕಾಣಿಸುತ್ತಿದೆ. ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್ (Family Drama Trailer) ನೋಡಿ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಹೊಸ ಟೀಮ್ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ…
ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸುವಲ್ಲಿ ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್ ಯಶಸ್ವಿ ಆಗಿದೆ. ಬಹಳ ಕ್ರಿಯೇಟಿವ್ ಆಗಿ ಈ ಟ್ರೇಲರ್ ಮೂಡಿಬಂದಿದೆ. ಇದರ ಮೇಕಿಂಗ್ ಕೂಡ ಗಮನ ಸೆಳೆಯುತ್ತಿದೆ. ಹೊಸ ನಿರ್ದೇಶಕ ಆಕರ್ಷ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಸಿದ್ಧವಾದ ಮೊದಲ ಸಿನಿಮಾ. ಈ ಮೊದಲು ಕೆಲವು ಕಿರುಚಿತ್ರಗಳನ್ನು ಅವರು ಮಾಡಿದ್ದಾರೆ. ರಿಷಬ್ ಶೆಟ್ಟಿಯ ತಂಡದಲ್ಲಿ ಕೆಲಸ ಮಾಡಿದ ಅನುಭವ ಆಕರ್ಷ್ ಅವರಿಗೆ ಇದೆ. ಬಿಡುಗಡೆ ಸಿದ್ಧವಾಗಿರುವ ‘ಲಾಫಿಂಗ್ ಬುದ್ದ’ ಚಿತ್ರತಂಡದಲ್ಲಿ ಆಕರ್ಷ್ ಅವರು ಕೆಲಸ ಮಾಡಿದ್ದಾರೆ.
‘ಫ್ಯಾಮಿಲಿ ಡ್ರಾಮಾ’ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ‘ಆಚಾರ್ ಆ್ಯಂಡ್ ಕೋ’ ಸಿನಿಮಾಗೆ ನಿರ್ದೇಶನ ಮಾಡಿ ನಟಿಸಿದ್ದ ಸಿಂಧೂ ಶ್ರೀನಿವಾಸ ಮೂರ್ತಿ ಹಾಗೂ ‘ಡೇರ್ಡೆವಿಲ್ ಮುಸ್ತಾಫ’ ಚಿತ್ರದಲ್ಲಿ ಅಭಿನಯಿಸಿದ್ದ ಅಭಯ್, ಪೂರ್ಣಚಂದ್ರ ಮೈಸೂರು ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಅನನ್ಯಾ ಅಮರ್, ರೇಖಾ ಕೂಡ್ಲಿಗಿ, ಆಶಿತ್, ಮಹದೇವ್ ಹಡಪದ್ ಮುಂತಾದವರು ಕೂಡ ‘ಫ್ಯಾಮಿಲಿ ಡ್ರಾಮಾ’ ಸಿನಿಮಾದಲ್ಲಿ ನಟಿಸಿದ್ದಾರೆ.
‘ಆಚಾರ್ ಆ್ಯಂಡ್ ಕೋ’ ಬಳಿಕ ಸಿಂಧೂ ಶ್ರೀನಿವಾಸ ಮೂರ್ತಿ ಒಪ್ಪಿಕೊಂಡ ಸಿನಿಮಾ ‘ಫ್ಯಾಮಿಲಿ ಡ್ರಾಮ’. ಇದು ಡಾರ್ಕ್ ಕಾಮಿಡಿ ಕಥಾಹಂದರವನ್ನು ಹೊಂದಿದೆ. ಮುಗ್ಧ ಫ್ಯಾಮಿಲಿಯೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಹಾನಿ ಇದರಲ್ಲಿದೆ. ಆ ಕಥೆಯನ್ನು ಪೂರ್ತಿಯಾಗಿ ನೋಡಿ ಎಂಜಾಯ್ ಮಾಡಲು ಪ್ರೇಕ್ಷಕರು ಕಾದಿದ್ದಾರೆ. ಟ್ರೇಲರ್ ನೋಡಿದ ಬಳಿಕ ಈ ಚಿತ್ರತಂಡದ ಮೇಲೆ ಭರವಸೆ ಮೂಡಿದೆ.
ಇದನ್ನೂ ಓದಿ: Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್ ಆ್ಯಂಡ್ ಕೋ’
ಕೇವಲ ಟ್ರೇಲರ್ ಮಾತ್ರವಲ್ಲದೇ, ‘ಫ್ಯಾಮಿಲಿ ಡ್ರಾಮಾ’ ಸಿನಿಮಾದ ಪೋಸ್ಟರ್ಗಳು ಕೂಡ ಗಮನ ಸೆಳೆಯುತ್ತಿವೆ. ಬಹಳ ಕ್ರಿಯೇಟಿವ್ ಆಗಿ ಪೋಸ್ಚರ್ ವಿನ್ಯಾಸ ಮಾಡಿಸಲಾಗಿದೆ. ವಿದೇಶದ ಪೋಸ್ಟರ್ ಡಿಸೈನರ್ಗಳು ಇದರ ಹಿಂದೆ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಮ್ಯೂಸಿಕ್ ಕೂಡ ರೆಟ್ರೋ ಶೈಲಿಯಲ್ಲಿದೆ. ಚೇತನ್ ಅಮಯ್ಯ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ. ದಬ್ಬುಗುಡಿ ಮುರಳಿಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.