‘ಸತ್ಯ ಎಲ್ಲಕ್ಕಿಂತ ದೊಡ್ಡದು, ನ್ಯಾಯ ಸಿಗುತ್ತದೆ’; ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ
ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಅವರು ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ.ಇಂದು ತೀರ್ಪು ಸಿಗಲಿದೆ. ಇತ್ತೀಚೆಗೆ, ಪವಿತ್ರಾ ಸತ್ಯವೇ ಜಯಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ಹಾಗೂ ದರ್ಶನ್ (Darshan) ಆಪ್ತೆ ಎನಿಸಿಕೊಂಡಿದ್ದ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆರೋಪಿ ಆಗಿದ್ದಾರೆ. ಆದರೆ, ತಮಗೂ ಕೊಲೆಗೂ ಯಾವುದೇ ಸಂಬಂಧ ಇಲ್ಲ ಎಂದು ಪವಿತ್ರಾ ಗೌಡ ಹೇಳುತ್ತಲೇ ಬರುತ್ತಿದ್ದಾರೆ. ರೇಣುಕಾಸ್ವಾಮಿ ಸಾವಿಗೆ ತಾವು ಕಾರಣರಲ್ಲ ಎಂಬುದು ಪವಿತ್ರಾ ಗೌಡ ಅವರ ವಾದ. ಇಂದು (ಆಗಸ್ಟ್ 14) ಸುಪ್ರೀಂಕೋರ್ಟ್ನಲ್ಲಿ ದರ್ಶನ್, ಪವಿತ್ರಾ ಸೇರಿದಂತೆ ಏಳು ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ. ಅದಕ್ಕೂ ಮೊದಲು ಪವಿತ್ರಾ ಗೌಡ ಮಾಡಿರೋ ಪೋಸ್ಟ್ ಗಮನ ಸೆಳೆದಿದೆ. ನ್ಯಾಯ ಸಿಗೋ ಭರವಸೆಯಲ್ಲಿ ಅವರಿದ್ದಾರೆ.
ಪವಿತ್ರಾ ಗೌಡ ಅವರು ಹಲವು ತಿಂಗಳುಗಳ ಕಾಲ ಜೈಲಿನಲ್ಲಿ ಇದ್ದು ಹೊರ ಬಂದಿದ್ದಾರೆ. ಅವರಿಗೆ ಕಳೆದ ವರ್ಷ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನನ್ನು ಕರ್ನಾಟಕ ಸರ್ಕಾರ ಸುಪ್ರೀಂಕೊರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. 17 ಆರೋಪಿಗಳ ಪೈಕಿ ಏಳು ಮಂದಿಯ ಜಾಮೀನು ರದ್ದು ಮಾಡುವಂತೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಹಲವು ದಿನಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ತನ್ನ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ.
ಅದಕ್ಕೂ ಮೊದಲು ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕಿಕೊಂಡಿರೋ ಪವಿತ್ರಾ ಗೌಡ, ‘ಸತ್ಯ ಎಲ್ಲಕ್ಕಿಂತ ಶಕ್ತಿಯುತವಾದುದ್ದು. ನ್ಯಾಯ ಸಿಕ್ಕೇ ಸಿಗುತ್ತದೆ’ ಎಂದು ಬರೆದುಕೊಂಡಿದ್ದಾರೆ. ಅವರು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಪವಿತ್ರಾ ಗೌಡ ಅವರು ಜಡ್ಜ್ಗಳ ಮುಂದೆ ತಮ್ಮ ಜಾಮೀನು ರದ್ದು ಮಾಡದಂತೆ ಕೋರಿದ್ದಾರೆ. ತಮಗೆ ಒಂದು ಮಗು ಇದೆ. ಅವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದೇ. ಹೀಗಾಗಿ, ಜಾಮೀನು ರದ್ದುಗೊಳಿಸಬಾರದು ಎಂದು ಕೋರ್ಟ್‌ನಲ್ಲಿ ವಾದ ಮುಂದಿಡಲಾಗಿದೆ.
ಇದನ್ನೂ ಓದಿ: ಆಗಸ್ಟ್ 14ಕ್ಕೆ ದರ್ಶನ್ ಭವಿಷ್ಯ ನಿರ್ಧಾರ; ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗುವ ಭಯ
ದರ್ಶನ್ಗೂ ಕೂಡ ಇಂದು ಪ್ರಮುಖ ದಿನವಾಗಿದೆ. ದರ್ಶನ್ಗೆ ಜಾಮೀನು ಮುಂದುವರಿಯುತ್ತದೆಯೋ ಅಥವಾ ರದ್ದಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಜಾಮೀನು ರದ್ದಾದರೆ ಅವರು ಮತ್ತೆ ಜೈಲು ಹಕ್ಕಿ ಆಗಬೇಕಾಗುತ್ತದೆ. ಅವರು ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಈಗ ಮತ್ತೆ ಜೈಲು ಸೇರಿದರೆ ಇದೇ ನೆಪ ಒಡ್ಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








