ಉಪೇಂದ್ರ ಶಿಷ್ಯನ ‘ಐ ಆ್ಯಮ್ ಗಾಡ್’ ಟ್ರೇಲರ್; ನ.7ಕ್ಕೆ ಸಿನಿಮಾ ಬಿಡುಗಡೆ

ರವಿ ಗೌಡ ಹಾಗೂ ವಿಜೇತಾ ಜೋಡಿಯಾಗಿ ನಟಿಸಿರುವ ‘ಐ ಆ್ಯಮ್ ಗಾಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಜನೀಶ್‌ ಲೋಕನಾಥ್‌ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಿತಿನ್‌ ದಾಸ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೆಂಬರ್‌ 7ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಮೂಲಕ ಕುತೂಹಲ ಮೂಡಿಸಲಾಗಿದೆ.

ಉಪೇಂದ್ರ ಶಿಷ್ಯನ ‘ಐ ಆ್ಯಮ್ ಗಾಡ್’ ಟ್ರೇಲರ್; ನ.7ಕ್ಕೆ ಸಿನಿಮಾ ಬಿಡುಗಡೆ
Ravi Gowda, Upendra

Updated on: Oct 27, 2025 | 4:27 PM

‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಇದು ಉಪೇಂದ್ರ ಅವರ ಶಿಷ್ಯ ರವಿ ಗೌಡ (Ravi Gowda) ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಸಿನಿಮಾ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಈ ಸಿನಿಮಾದ 2 ಹಾಡುಗಳು ಹಿಟ್ ಆಗಿವೆ. ಈಗ ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ. ‘ಐ ಆ್ಯಮ್ ಗಾಡ್’ (I am God) ಚಿತ್ರದಲ್ಲಿ ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಇದೆ.

‘ಐ ಆ್ಯಮ್ ಗಾಡ್’ ಎಂಬ ಡೈಲಾಗ್ ಕೇಳಿದರೆ ಉಪೇಂದ್ರ ಅವರೇ ನೆನಪಾಗುತ್ತಾರೆ. ‘ಎ’ ಸಿನಿಮಾ ಆ ಡೈಲಾಗ್ ಅಷ್ಟು ಫೇಮಸ್. ರವಿ ಗೌಡ ಅವರು ಉಪೇಂದ್ರರ ಗರಡಿಯಲ್ಲಿ ಸಿನಿಮಾದ ಪಾಠಗಳನ್ನು ಕಲಿತವರು. ಉಪೇಂದ್ರ ಜೊತೆ ‘ಉಪ್ಪಿ 2’ ಸಿನಿಮಾದಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದರು. ಈಗ ‘ಐ ಆ್ಯಮ್ ಗಾಡ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಉಪೇಂದ್ರ ಅವರಿಗೆ ‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್ ಇಷ್ಟ ಆಗಿದೆ. ಟ್ರೇಲರ್ ಬಿಡುಗಡೆ ಬಳಿಕ ಅವರು ಮಾತನಾಡಿ, ತಮ್ಮ ಶಿಷ್ಯನ ಸಿನಿಮಾ ಪ್ರೀತಿಯನ್ನು ಶ್ಲಾಘಿಸಿದರು. ‘ಉಪ್ಪಿ 2’ ಸಿನಿಮಾದ ಸಂದರ್ಭದಲ್ಲಿ ರವಿ ಗೌಡ ಬಹಳ ಆಸಕ್ತಿಯಿಂದ ಸಿನಿಮಾದ ಕೆಲಸಗಳನ್ನು ಕಲಿಯುತ್ತಿದ್ದರು ಎಂಬುದನ್ನು ಉಪೇಂದ್ರ ನೆನಪು ಮಾಡಿಕೊಂಡರು.

‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್:

ಈ ವೇಳೆ ಮಾತನಾಡಿದ ರವಿ ಗೌಡ, ‘ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದಾಗ ಯಾವುದೇ ಸಿನಿಮಾ ಯೂನಿವರ್ಸಿಟಿ ಬೇಡ ಉಪ್ಪಿ ಸರ್‌ ಹತ್ತಿರ ಹೋಗುವುದೇ ಬೆಸ್ಟ್‌ ಅಂತ ಹೋಗಿ ರಿಕ್ವೆಸ್ಟ್‌ ಮಾಡಿ ಸೇರಿಕೊಂಡೆ. ಐ ಆ್ಯಮ್ ಗಾಡ್ ಸಿನಿಮಾ ಕಷ್ಟಪಟ್ಟು ಮಾಡಿದ್ದೇವೆ. ಬಂದು ನೋಡಿ ಅಂತ ನಾವು ಹೇಳಲ್ಲ. ಆದರೆ ನಿಮ್ಮ ಗುಂಪಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬ ವ್ಯಕ್ತಿ ಇದ್ದೇ ಇರ್ತಾರೆ. ಅವರಿಗೆ ಕರೆ ಮಾಡಿ ನಮ್ಮ ಸಿನಿಮಾ ಹೇಗಿದೆ ಅಂತ ಕೇಳಿ ಸಾಕು’ ಎಂದು ಹೇಳಿದರು.

ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದವರ ಸುಳಿವು ಪತ್ತೆ

‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್​​ನಲ್ಲಿ ಕಥೆಯ ಬಗ್ಗೆ ಹಿಂಟ್ ನೀಡಲಾಗಿದೆ. ಇದೊಂದು ‌ಸಸ್ಪೆನ್ಸ್ ಥ್ರಿಲ್ಲರ್ ಲವ್‌ ಸ್ಟೋರಿ ಇರುವ ಸಿನಿಮಾ ಎಂಬ ಸುಳಿವು ಸಿಕ್ಕಿದೆ. ಸಿನಿಮಾದ ಮೇಕಿಂಗ್‌ ಶೈಲಿ ಗಮನ ಸೆಳೆಯುತ್ತಿದೆ. ಉಪ್ಪಿ ಶಿಷ್ಯನ ಸಿನಿಮಾ ಎಂಬ ಕಾರಣದಿಂದಲೂ ಹೆಚ್ಚು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ವಿಜೇತಾ, ರವಿಶಂಕರ್‌, ಅವಿನಾಶ್‌, ಅರುಣಾ ಬಾಲರಾಜ್‌, ನಿರಂಜನ್‌ ಕುಮಾರ್‌ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.