ಉತ್ತರ ಕರ್ನಾಟಕದ ಪ್ರತಿಭೆಗಳ ‘ಲಕ್ಷ್ಯ’ ಸಿನಿಮಾ; ನೈಜ ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ

ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಥೆಗಳು ಇನ್ನಷ್ಟು ಬರಬೇಕು ಎಂಬುದು ಆ ಭಾಗದ ಪ್ರೇಕ್ಷಕರ ಬೇಡಿಕೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ‘ಲಕ್ಷ್ಯ’ ಸಿನಿಮಾ ನಿರ್ಮಾಣ ಆಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಉತ್ತರ ಕರ್ನಾಟಕದ ಪ್ರತಿಭೆಗಳ ‘ಲಕ್ಷ್ಯ’ ಸಿನಿಮಾ; ನೈಜ ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ
Lakshya Movie Team

Updated on: Jun 27, 2025 | 8:39 PM

ಇತ್ತೀಚೆಗೆ ‘ಲಕ್ಷ್ಯ’ ಸಿನಿಮಾದ (Lakshya Kannada Movie) ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಂದಹಾಗೆ ಇದು ಮಕ್ಕಳ ಸಿನಿಮಾ. ‘ಲಕ್ಷ್ಯ’ ಸಿನಿಮಾ ಈಗ ತೆರೆಗೆ ಬರಲು ಸಿದ್ದವಾಗುತ್ತಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. 1990ರ ದಶಕದಲ್ಲಿ, ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸಿನಿಮಾ ಮಾಡಲಾಗಿದೆ. ಆ ಘಟನೆ ಏನು ಎಂಬುದು ಸಿನಿಮಾ ಬಿಡುಗಡೆ ಆದ ನಂತರ ತಿಳಿಯಲಿದೆ.

ಉತ್ತರ ಕರ್ನಾಟಕ ಮೂಲದ ಅರ್ಜುನ ಪಿ. ಡೊಣೂರ ಅವರು ‘ಲಕ್ಷ್ಯ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಸುನೀಲ್, ಲಹರಿ ವೇಲು ಮುಂತಾದವರ ಉಪಸ್ಥಿತಿಯಲ್ಲಿ ‘ಲಕ್ಷ್ಯ’ ಟೀಸರ್ ಹಾಗೂ ಹಾಡುಗಳನ್ನು ರಿಲೀಸ್ ಮಾಡಲಾಯಿತು. ‘ಸಾಮ್ರಾಟ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

ಸಿನಿಮಾ ಬಗ್ಗೆ ನಿರ್ಮಾಪಕ/ನಿರ್ದೇಶಕ ಅರ್ಜುನ ಪಿ. ಡೊಣೂರ ಮಾತಾಡಿದರು. ‘ಇದೊಂದು ಮಕ್ಕಳ ಸಿನಿಮಾ. ಮಕ್ಕಳು ಯಾವ ವಿಷಯಕ್ಕೆ ಲಕ್ಷ್ಯ ಕೊಡುತ್ತಾರೆ, ಅದರಿಂದ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ ಈ ಸಿನಿಮಾದಲ್ಲಿದೆ. ಅಲ್ಲಿನ ಕಲಾವಿದರೇ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳ ಚಿತ್ರ ಆದ್ದರಿಂದ ಬಹುತೇಕ ಮಕ್ಕಳೇ ಇದರಲ್ಲಿ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ’ ಎಂದು ಅವರು ಹೇಳಿದರು.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ಲಕ್ಷ್ಯ’ ಸಿನಿಮಾದ 3 ಹಾಡುಗಳಿಗೆ ಆರವ್ ರಿಶಿಕ್ ಅವರು ಸಂಗೀತ ಸಂಯೋಜಿಸಿದ್ದಾರೆ. ಡಾ. ದೊಡ್ಡರಂಗೇಗೌಡ, ಶಂಕರ ಪಾಗೋಜಿ ಹಾಗೂ ಶಿವಾನಂದ ಭೂಶಿ ಅವರು ಸಾಹಿತ್ಯ ಬರೆದಿದ್ದಾರೆ. ಅನಿರುದ್ದ ಶಾಸ್ತ್ರೀ, ಚೇತನ್ ನಾಯಕ್, ಮದ್ವೇಶ್ ಭಾರದ್ವಾಜ್ ಮುಂತಾದವರು ಹಾಡುಗಳು ಧ್ವನಿಯಾಗಿದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಅವರ ಛಾಯಾಗ್ರಹಣ, ಆರ್. ಮಹಾಂತೇಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್

ಉತ್ತರ ಕರ್ನಾಟಕದ ಬಾಗಲಕೋಟೆ, ಕೂಡಲ ಸಂಗಮ ಸುತ್ತಮುತ್ತ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಸದ್ಯ ಟ್ರೇಲರ್ ಮತ್ತು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.