ವಿ. ರವಿಚಂದ್ರನ್ (V Ravichandran) ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಇಂದು ಅವರ ಹೊಸ ಸಿನಿಮಾ ‘ಪ್ರೇಮಲೋಕ 2’ ಸೆಟ್ಟೇರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ರವಿಚಂದ್ರನ್ ತಂದೆ ವೀರಸ್ವಾಮಿಯೇ ಹೀರೋ. ರವಿಚಂದ್ರನ್ ಸಿನಿಮಾ ರಂಗದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ‘ಶಾಂತಿ ಕ್ರಾಂತಿ’ ಸಿನಿಮಾನ ಅರ್ಧಕ್ಕೆ ನಿಲ್ಲಿಸೋ ಆಲೋಚನೆ ಅವರಿಗೆ ಬಂದಿತ್ತು. ಆದರೆ, ಅವರ ತಂದೆ ಇದಕ್ಕೆ ಅವಕಾಶ ಕೊಡಲಿಲ್ಲ.
‘ಶಾಂತಿ ಕ್ರಾಂತಿ’ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಈಗಿನಂತೆ ಒಂದು ಭಾಷೆಯಲ್ಲಿ ಸಿನಿಮಾ ಮಾಡಿ ಉಳಿದ ಭಾಷೆಗೆ ಸಿನಿಮಾ ಡಬ್ ಮಾಡಿಲ್ಲ. ಬದಲಿಗೆ ಆಯಾ ಭಾಷೆಗೆ ಆಯಾ ಭಾಷೆಯ ಸ್ಟಾರ್ ಹೀರೋಗಳನ್ನೇ ಹಾಕಿಕೊಳ್ಳಲಾಗಿತ್ತು. ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ನಷ್ಟ ಅನುಭವಿಸಿತು.
ಸಿನಿಮಾ ಶೂಟಿಂಗ್ ಆರಂಭ ಆದ ಕೆಲವೇ ಸಮಯದಲ್ಲಿ ಅವರಿಗೆ ಸಿನಿಮಾ ಯಶಸ್ಸು ಕಾಣುವುದಿಲ್ಲ ಎನ್ನುವ ಸೂಚನೆ ಸಿಕ್ಕಿತ್ತು. ಕೆಲವು ದಿನಗಳ ಶೂಟಿಂಗ್ ಆಗಲೇ ಪೂರ್ಣಗೊಂಡಿತ್ತು. ಆದಾಗ್ಯೂ ಈ ಚಿತ್ರವನ್ನು ನಿಲ್ಲಿಸೋ ಆಲೋಚನೆಯನ್ನು ರವಿಚಂದ್ರನ್ ಮಾಡಿದ್ದರು. ‘ಶಾಂತಿ ಕ್ರಾಂತಿ ನಿಲ್ಲಿಸೋಣ ಎಂದುಕೊಂಡೆ. ಆಗಲೇ ಒಂದಷ್ಟು ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ನಾನು ಅಂದುಕೊಂಡಂಗೆ ಸಿನಿಮಾ ಆಗ್ತಿಲ್ಲ. ಎಲ್ಲರ ಇಮೇಜ್ ಬೇರೆ ಬೇರೆ ಇದೆ. ಕಥೆ ಅಂದುಕೊಂಡಂತೆ ಬರ್ತಿಲ್ಲ. ಸಿನಿಮಾನ ನಿಲ್ಲಿಸಿ ಬಿಡ್ತೀನಿ ಎಂದು ತಂದೆಗೆ ಹೇಳಿದ್ದೆ’ ಎಂದು ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದರು.
ಇದನ್ನು ಕೇಳಿ ರವಿಚಂದ್ರನ್ ತಂದೆಗೆ ಸಖತ್ ಸಿಟ್ಟು ಬಂದೋಯ್ತು. ‘ನನ್ನ ತಂದೆ ಕಪಾಳಕ್ಕೆ ಹೊಡೆದಿಲ್ಲ ಅಷ್ಟೇ’ ಎಂದು ರವಿಚಂದ್ರನ್ ಆ ಘಟನೆ ನೆನಪಿಸಿಕೊಂಡಿದ್ದರು. ‘ಇದು ಈಶ್ವರಿ ಪ್ರೊಡಕ್ಷನ್ಸ್ ಸಿನಿಮಾ. ನಿನ್ನ ನಂಬಿ ನಾಗಾರ್ಜುನ, ರಜನಿಕಾಂತ್ ಡೇಟ್ಸ್ ಕೊಟ್ಟಿದ್ದಾರೆ. ಈ ರೀತಿಯ ಶಬ್ದಗಳನ್ನು ಮತ್ತೆ ಆಡಬೇಡ’ ಎಂದು ವೀರಸ್ವಾಮಿ ರವಿಚಂದ್ರನ್ಗೆ ಖಡಕ್ ಆಗಿ ಹೇಳಿದ್ದರು. ಕೊನೆಗೂ ಆ ಸಿನಿಮಾನ ಮಾಡಿ ಮುಗಿಸಿದರು ರವಿಚಂದ್ರನ್. ಇದು ಅವರಿಗೆ ದೊಡ್ಡ ಹೊರೆ ಆಯಿತು.
ಇದನ್ನೂ ಓದಿ: ‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
ಈ ಸಿನಿಮಾಗೆ ಹಾಕಿದ ಬಜೆಟ್ನ ತೀರೀಸೋಕೆ ರವಿಚಂದ್ರನ್ಗೆ ಹಿಡಿದಿದ್ದು ಬರೋಬ್ಬರಿ 15 ವರ್ಷಗಳು. ಸುಮಾರು ವರ್ಷಗಳ ಕಾಲ ಈ ಸಿನಿಮಾಗಾಗಿ ಮಾಡಿದ ಸಾಲ ತೀರಿಸುವುದರಲ್ಲೇ ಅವರು ಕಳೆದರು. ‘ ಆ ಬಗ್ಗೆ ನೋವಿಲ್ಲ. ಎಲ್ಲಾ ಸಾಲವನ್ನು ತೀರಿಸಿದೆ. ಬಡ್ಡಿ ಕಡಿಮೆ ಮಾಡಿಲ್ಲ ಎಂದು ಕೇಳಿಲ್ಲ’ ಎಂದು ರವಿಚಂದ್ರನ್ ಅವರು ಹೇಳಿಕೊಂಡಿದ್ದರು.
ರವಿಚಂದ್ರನ್ ಅವರು ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ ‘ದಿ ಜಡ್ಜ್ಮೆಂಟ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.