ಶಶಿಕುಮಾರ್ ಪುತ್ರನ ಸಿನಿಮಾ ‘ಕಾದಾಡಿ’; ಹೊಸ ಹಾಡು ಬಿಡುಗಡೆ ಮಾಡಿದ ಚಿತ್ರತಂಡ
ಆದಿತ್ಯ ಶಶಿಕುಮಾರ್ ನಟನೆಯ ಹೊಸ ಸಿನಿಮಾದ ಹೆಸರು ‘ಕಾದಾಡಿ’. ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾಗೆ ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರಾಗಿದ್ದಾರೆ. ಜೂನ್ನಲ್ಲಿ ‘ಕಾದಾಡಿ’ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಈಗ ಹೊಸ ಸಾಂಗ್ ರಿಲೀಸ್ ಮಾಡಲಾಗಿದೆ.
ಕನ್ನಡ ಚಿತ್ರರಂಗದ ಹೆಸರಾಂತ ನಟ, ‘ಸುಪ್ರೀಂ ಹೀರೋ’ ಶಶಿಕುಮಾರ್ (Shashikumar) ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ. ಆದಿತ್ಯ ಶಶಿಕುಮಾರ್ (Aditya Shashikumar) ಎಂಬುದು ಅವರ ಹೊಸ ಹೆಸರು! ಅದಿತ್ಯ ಶಶಿಕುಮಾರ್ ಅವರು ‘ಕಾದಾಡಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಕಾದಾಡಿ’ (Kaadaadi) ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
ಅದಿತ್ಯ ಶಶಿಕುಮಾರ್ ಅಭಿನಯಿಸಿದ ‘ಕಾದಾಡಿ’ ಸಿನಿಮಾ ಕನ್ನಡದ ಜೊತೆ ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ಸಿದ್ದವಾಗಿದೆ. ಸತೀಶ್ ಮಾಲೆಂಪಾಟಿ ಅವರು ನಿರ್ದೇಶನ ಮಾಡಿದ್ದಾರೆ. ‘ಅರುಣಂ ಫಿಲ್ಮ್ಸ್’ ಮೂಲಕ ಅವರು ನಿರ್ಮಾಣವನ್ನೂ ಮಾಡಿದ್ದಾರೆ. ‘ಕಾದಾಡಿ’ ಸಿನಿಮಾದ ಪ್ರಚಾರ ಕಾರ್ಯ ಆರಂಭ ಆಗಿದೆ. ಅದರ ಸಲುವಾಗಿ ಇತ್ತೀಚೆಗಷ್ಟೇ ಹೀರೋ ಇಂಟ್ರಡಕ್ಷನ್ ರೀತಿ ಇರುವ ‘ಹೆಲ್ಲೋ ಎವರಿಬಡಿ..’ ಹಾಡಿನ ಲಿರಿಕಲ್ ವಿಡಿಯೋವನ್ನು ಅನಾವರಣ ಮಾಡಿದೆ ಚಿತ್ರತಂಡ.
ಇದನ್ನೂ ಓದಿ: ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ‘ಅನರ್ಥ’ ಸಿನಿಮಾದ ಹಾಡು, ಟೀಸರ್ ರಿಲೀಸ್
‘ಕಾದಾಡಿ’ ಸಿನಿಮಾದ ಈ ಹಾಡಿಗೆ ಎನ್. ಮಾರುತಿ ಅವರು ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ‘ಜೀವನದ ಅಂತ್ಯದಲ್ಲಿ ಎಲ್ಲರೂ ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದಿನ ಸತ್ತು ಹೋಗುತ್ತೇವೆ. ಆದರೆ ನಮ್ಮ ಬದುಕನ್ನು ತ್ಯಾಗ ಮಾಡುವ ಮುಖಾಂತರ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ದಿನದಿಂದ ದಿನಕ್ಕೆ ನಾವು ಹೋರಾಟ ನಡೆಸುತ್ತಿದ್ದೇವೆ. ಇಂತಹ ಅನೇಕ ಅಂಶಗಳನ್ನು ಥ್ರಿಲ್ಲರ್ ಕಥಾಹಂದರದ ಮೂಲಕ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಚಿತ್ರತಂಡದವರು ಹೇಳಿದ್ದಾರೆ.
ಚಿಕ್ಕಮಗಳೂರು, ಗೋವಾ, ಹೈದರಾಬಾದ್, ಚೆನ್ನೈ ಮುಂತಾದ ಕಡೆಗಳಲ್ಲಿ ‘ಕಾದಾಡಿ’ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಸಿನಿಮಾವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿದೆ. ಲಾವಣ್ಯ ಸಾಹುಕಾರ ಮತ್ತು ಚಾಂದಿನಿ ತಮಿಳರಸನ್ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಪೋಸಾನಿ, ಮಾರಿಮುತ್ತು, ರವಿ ಕಾಳೆ, ಶ್ರವಣ್ ರಾಘವೇಂದ್ರ, ಪ್ರೇಮ್ ಮನೋಹರ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ 6 ಹಾಡುಗಳಿಗೆ ಭೀಮ್ಸ್ ಸಿಸಿರೋಲಿಯೋ ಅವರು ಸಂಗೀತ ನೀಡಿದ್ದಾರೆ. ಡಿ. ಯೋಗಿ ಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಸೂರಿಸೆಟ್ಟಿ ಕಲೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಕಾಶ್ ತೋಟ ಅವರು ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.