ಟ್ರೇಲರ್ ಮೂಲಕ ಗಮನ ಸೆಳೆದ ಮಕ್ಕಳ ಸಿನಿಮಾ ‘ವಲವಾರ’: ಸದ್ಯದಲ್ಲೇ ಬಿಡುಗಡೆ

ಮಲೆನಾಡಿನ ಗ್ರಾಮೀಣ ಪರಿಸರದ ಕಥೆ ಹೊಂದಿರುವ ‘ವಲವಾರ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾವನ್ನು ಸಕಲೇಶಪುರದಲ್ಲಿ ಚಿತ್ರಿಸಲಾಗಿದೆ. ಸುತನ್ ಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ಗಮನ ಸೆಳೆಯುತ್ತಿದೆ. ಒಂದು ಹಸು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಾಗಿ ಇರಲಿದೆ.

ಟ್ರೇಲರ್ ಮೂಲಕ ಗಮನ ಸೆಳೆದ ಮಕ್ಕಳ ಸಿನಿಮಾ ‘ವಲವಾರ’: ಸದ್ಯದಲ್ಲೇ ಬಿಡುಗಡೆ
Valavaara Movie Poster

Updated on: Oct 19, 2025 | 10:19 AM

‘ವಲವಾರ’ ಸಿನಿಮಾದ (Valavaara Kannada Movie) ಕಥೆಯನ್ನು ಪುನೀತ್‌ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಕೇಳಿ ಮೆಚ್ಚಿಕೊಂಡಿದ್ದರು. ‘ಪಿಆರ್‌ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಿಸಲು ಉದ್ದೇಶಿಸಿದ್ದರು. ಆದರೆ ಪುನೀತ್ ನಿಧನರಾದ ಕಾರಣ ಆ ಸಂಸ್ಥೆಯಿಂದ ‘ವಲವಾರ’ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಬೇಸರ ಇದೆ ಎಂದು ನಿರ್ದೇಶಕ ಸುತನ್‌ ಗೌಡ ಹೇಳಿದ್ದಾರೆ. ಈಗ ‘ವಲವಾರ’ ಸಿನಿಮಾದ ಟ್ರೇಲರ್ (Valavaara Trailer) ಮತ್ತು ಹಾಡು ಗಮನ ಸೆಳೆದಿವೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಪಡೆದುಕೊಂಡಿದೆ. ನವೆಂಬರ್ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇದು ಕನ್ನಡದ ಮಣ್ಣಿನ ಸೊಗಡು ಇರುವ ಕಥೆ. ಸಕಲೇಶಪುರದ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ. ‘ವಲವಾರ’ ಒಂದು ಮಕ್ಕಳ ಸಿನಿಮಾ. ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ಈ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಬಾಲ್ಯ, ಜೀವನ ಮೌಲ್ಯಗಳನ್ನು ಪ್ರೇಕ್ಷಕರ ಮುಂದಿರಿಸುತ್ತದೆ. ಗ್ರಾಮೀಣ ಕರ್ನಾಟಕದ ಸೌಂದರ್ಯವನ್ನು ಸೆರೆಹಿಡಿಯುತ್ತದೆ ಎಂದು ಚಿತ್ರತಂಡ ಹೇಳಿದೆ.

ಗಿರಿಧರ್ ಜೆ ಹಾಗೂ ಅನಿರುದ್ಧ್ ಗೌತಮ್ ಅವರು ‘ಮಾರ್ಫ್ ಪ್ರೊಡಕ್ಷನ್ಸ್’ ಮೂಲಕ ‘ವಲವಾರ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಮಾಯಾಬಜಾರ್’, ‘ಐರಾವತ’, ‘ರಾಟೆ’, ‘ಜ್ಯೂನಿಯರ್’ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಸುತನ್ ಗೌಡ ಅವರು ‘ವಲವಾರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

‘ವಲವಾರ’ ಸಿನಿಮಾದ ಟ್ರೇಲರ್:

ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಮತ್ತು ಒಂದು ಹಾಡನ್ನು ಬಿಡುಗಡೆ ಮಾಡಲಾಯಿತು. ಟ್ರೇಲರ್ ನೋಡಿದ ಪ್ರೇಕ್ಷಕರು ಪಾಸಿಟವ್ ಆಗಿ ಕಮೆಂಟ್ ಮಾಡಿದ್ದಾರೆ. ಆ ಮೂಲಕ ‘ವಲವಾರ’ ಸಿನಿಮಾ ಭರವಸೆ ಮೂಡಿಸಿದೆ. ಬಾಲ ನಟರಾದ ವೇದಿಕ್ ಕೌಶಲ್ ಮತ್ತು ಶಯನ್ ಅವರು ಮುಖ್ಯ ಪಾತ್ರಗಳನ್ನು ಮಾಡಿದ್​ದಾರೆ. ಮಾಲತೇಶ್, ಹರ್ಷಿತಾ ಗೌಡ, ಅಭಯ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

‘ವಲವಾರ’ ಸಿನಿಮಾದ ಕಥೆಗೆ ತಕ್ಕಂತೆ ಸಕಲೇಶಪುರದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕದ್ರಿ ಮಣಿಕಾಂತ್ ಅವರು ಸಂಗೀತ ನೀಡಿದ್ದಾರೆ. ಪ್ರಮೋದ್‌ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಬಾಲರಾಜ್‌ ಗೌಡ ಅವರ ಛಾಯಾಗ್ರಹಣ, ಶ್ರೀಕಾಂತ್ ಎಸ್.ಹೆಚ್. ಅವರ ಸಂಕಲನ ಈ ಸಿನಿಮಾಗಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಸುಮನ್ ಹೆಚ್.ಎಸ್. ಕೆಲಸ ಮಾಡಿದ್ದಾರೆ. ಸಿಂಕ್‌ ಸೌಂಡ್ ವಿಭಾಗದಲ್ಲಿ ಆದರ್ಶ್‌ ಜೋಸೆಫ್, ಶಬ್ದವಿನ್ಯಾಸ ವಿಭಾಗದಲ್ಲಿ ವಿ.ಜಿ. ರಾಜನ್ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: 17 ದಿನದಲ್ಲಿ 506 ಕೋಟಿ ರೂ. ಗಳಿಸಿದ ‘ಕಾಂತಾರ ಚಾಪ್ಟರ್ 1’: ವಿಶ್ವಾದ್ಯಂತ ಎಷ್ಟು ಕಲೆಕ್ಷನ್?

‘ನನ್ನ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳನ್ನು ಚಿತ್ರಕಥೆಗೆ ಬಳಸಿಕೊಂಡಿದ್ದೇನೆ. ಬಡ ರೈತನ ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದು. ಗೌರ ಎಂಬ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ ಆಗಿದೆ. ನೋಡುಗರನ್ನು ಮನರಂಜಿಸುತ್ತಾ ಮುಂದೇನು ಎಂಬ ಕೌತುಕ ಹುಟ್ಟಿಸುತ್ತ ಸಾಗುವ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.