17 ದಿನದಲ್ಲಿ 506 ಕೋಟಿ ರೂ. ಗಳಿಸಿದ ‘ಕಾಂತಾರ ಚಾಪ್ಟರ್ 1’: ವಿಶ್ವಾದ್ಯಂತ ಎಷ್ಟು ಕಲೆಕ್ಷನ್?
ಪ್ರತಿ ದಿನವೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಬಿಡುಗಡೆ ಆಗಿ 17 ದಿನ ಕಳೆದರೂ ಸಹ ಈ ಸಿನಿಮಾಗೆ ಎಲ್ಲ ಕಡೆಗಳಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ಕಲೆಕ್ಷನ್ ವರದಿ ಇಲ್ಲಿದೆ..

ನಟ ರಿಷಬ್ ಶೆಟ್ಟಿ (Rishab Shetty) ಅವರು ಸೂಪರ್ ಸ್ಟಾರ್ ಆಗಿದ್ದಾರೆ. ಅತಿ ಬೇಡಿಕೆಯ ನಟನಾಗಿ, ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಗೆಲುವು. ಅಕ್ಟೋಬರ್ 2ರಂದು ಬಿಡುಗಡೆ ಆದ ಈ ಸಿನಿಮಾ ಇಂದಿಗೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲ ಭಾಷೆಗಳಲ್ಲೂ ಅಬ್ಬರಿಸುತ್ತಿದೆ. 17 ದಿನಗಳು ಕಳೆದರೂ ಕೂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಉತ್ತಮವಾಗಿಯೇ ಕಲೆಕ್ಷನ್ (Kantara Chapter 1 Collection) ಆಗುತ್ತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಗಳಿಕೆ 500 ಕೋಟಿ ರೂಪಾಯಿ ಮೀರಿದೆ. ಈ ಬಗ್ಗೆ ಇಲ್ಲಿದೆ ವಿವರ..
Sacnilk ವರದಿ ಪ್ರಕಾರ ‘ಕಾಂತಾರ: ಚಾಪ್ಟರ್ 1’ ಸಿನಿಮಾ 17ನೇ ದಿನ ಭಾರತದ ಗಲ್ಲಾಪೆಟ್ಟಿಗೆಯಲ್ಲಿ 12.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲಿಗೆ, ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ 506 ಕೋಟಿ ರೂಪಾಯಿ ಆಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಯಲ್ಲಿ ಬಿಡುಗಡೆ ಆದ ಈ ಸಿನಿಮಾಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಭಾರತದ ಆಚೆ ಕೂಡ ಹಲವು ದೇಶಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಉತ್ತಮವಾಗಿ ಪ್ರದರ್ಶನ ಕಂಡಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯೇ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಎರಡು ವಾರಗಳಲ್ಲಿ ಈ ಸಿನಿಮಾಗೆ ವಿಶಾದ್ಯಂತ 717.50 ಕೋಟಿ ರೂಪಾಯಿ ಆಗಿದೆ. ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಭಾನುವಾರ (ಅಕ್ಟೋಬರ್ 19) ಕೂಡ ಅನೇಕ ಕಡೆಗಳಲ್ಲಿ ಬುಕಿಂಗ್ ಚೆನ್ನಾಗಿದೆ. ಅಲ್ಲದೇ, ದೀಪಾವಳಿ ಹಬ್ಬದ ರಜೆ ಬಂದಿರುವುದರಿಂದ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಜಾಸ್ತಿ ಇದೆ. ಈ ಎಲ್ಲದರ ಪರಿಣಾಮವಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇನ್ನೂ ಉತ್ತಮವಾಗಿ ಕಲೆಕ್ಷನ್ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಅಭಿಮಾನಿಗಳ ಋಣ ತೀರಿಸಲು ಕೆಲಸ ಮಾಡ್ತೀನಿ: ಮೈಸೂರಲ್ಲಿ ರಿಷಬ್ ಶೆಟ್ಟಿ ಭರವಸೆ
‘ಕಾಂತಾರ: ಚಾಪ್ಟರ್ 1’ ಸಿನಿಮಾದಿಂದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಭರ್ಜರಿ ಲಾಭ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಖ್ಯಾತಿ ಹೆಚ್ಚಾಗಿದೆ. ನಟಿ ರುಕ್ಮಿಣಿ ವಸಂತ್ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಫೇಮಸ್ ಆಗಿದ್ದಾರೆ. ಪರಭಾಷೆ ಮಂದಿ ಮತ್ತೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




