AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಅಪ್ಲಿಕೇಶನ್ ಪ್ರೋಮೊಗೆ ಸುದೀಪ್ ದನಿ: ಆಪ್​​ನ ವಿಶೇಷತೆ ಏನು?

Puneeth Rajkumar application: ಪುನೀತ್ ರಾಜ್​​ಕುಮಾರ್ ಅಗಲಿ ವರ್ಷಗಳು ಆಗಿವೆ. ಆದರೆ ಇಂದಿಗೂ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅಶ್ವಿನಿ ಪುನೀತ್​​ರಾಜ್​​ಕುಮಾರ್ ಅವರು ಪುನೀತ್ ರಾಜ್​​ಕುಮಾರ್ ನೆನಪಲ್ಲಿ ಹೊಸ ಆಪ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಅಪ್ಲಿಕೇಶನ್ ಬಗೆಗಿನ ಪ್ರೋಮೊ ಬಿಡುಗಡೆ ಆಗಿದ್ದು, ಪ್ರೋಮೊಕ್ಕೆ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಅಪ್ಪು ಅಪ್ಲಿಕೇಶನ್ ಪ್ರೋಮೊಗೆ ಸುದೀಪ್ ದನಿ: ಆಪ್​​ನ ವಿಶೇಷತೆ ಏನು?
Prk Promo
ಮಂಜುನಾಥ ಸಿ.
|

Updated on:Oct 18, 2025 | 6:11 PM

Share

ಪುನೀತ್ ರಾಜ್​​ಕುಮಾರ್ ಕಾಲವಾಗಿ 4 ವರ್ಷಗಳಾಗುತ್ತಾ ಬಂತು. ಇಂದಿಗೂ ಪುನೀತ್ ಅವರನ್ನು ಅಭಿಮಾನಿಗಳು ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಪ್ಪು ಅವರ ಸಿನಿಮಾಗಳಿಂದ ಮಾತ್ರವಲ್ಲ ಅವರ ಅದ್ಭುತ ವ್ಯಕ್ತಿತ್ವ, ಸೇವೆಯ ಕಾರಣಗಳಿಂದಾಗಿ ಅವರು ಕೋಟ್ಯಂತರ ಜನರಿಗೆ ಹತ್ತಿರವಾಗಿದ್ದರು. ಅವರು ಮಾಡಿದ ಸೇವೆ, ಮಾಡಿದ ಸಹಾಯದಿಂದ ಅವರು ಅಜರಾಮರರಾಗಿದ್ದಾರೆ. ಇದೀಗ ಅಪ್ಪು ಅವರನ್ನು ಸದಾ ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಕಾರ್ಯವೊಂದನ್ನು ಕೈಗೊಂಡಿದ್ದಾರೆ. ಅಪ್ಪು ಅಪ್ಲಿಕೇಶನ್ ಅನ್ನು ಹೊರತರಲು ಮುಂದಾಗಿದ್ದು, ಅಪ್ಪು ಅಪ್ಲಿಕೇಶನ್ ಟೀಸರ್​​ಗೆ ಸುದೀಪ್ ಧ್ವನಿ ನೀಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಜೀವನ, ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಪಿಆರ್​​ಕೆ ಹೆಸರಿನ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದ್ದು, ಅದನ್ನು ಅಕ್ಟೋಬರ್ 25 ರಂದು ಬಿಡುಗಡೆ ಮಾಡಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇನ್ನೂ ಕೆಲವು ಗಣ್ಯರು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದೀಗ ಅಪ್ಲಿಕೇಶನ್​​ನ ಪ್ರೋಮೊ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಪ್ರೋಮೊಗೆ ಅಪ್ಪು ಅವರ ಆಪ್ತ ಗೆಳೆಯರೂ ಆಗಿದ್ದ ಸುದೀಪ್ ಅವರು ಧ್ವನಿ ನೀಡಿದ್ದಾರೆ.

ಪುನೀತ್ ರಾಜ್​​ಕುಮಾರ್ ಅವರ ಕೆಲವು ಚಿತ್ರಗಳನ್ನು ಬಳಸಿ ಅವಕ್ಕೆ ಎಐ ಮೂಲಕ ಅದ್ಭುತ ರೂಪ ಕೊಟ್ಟು ಪ್ರೋಮೊ ವಿಡಿಯೋ ಮಾಡಲಾಗಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ಸುದೀಪ್ ಅವರು ಧ್ವನಿ ನೀಡಿದ್ದಾರೆ. ಅಪ್ಪು ಅವರ ಜೀವನ ಪಯಣ, ಸಿನಿಮಾ, ಖಾಸಗಿ ಜೀವನ, ಅವರ ಸಮಾಜ ಸೇವೆ, ನಿಧನ ಎಲ್ಲದರ ಬಗ್ಗೆ ಸುದೀಪ್ ಅವರು ಹೇಳಿದ್ದು, ಕನ್ನಡ ಮಾತ್ರವಲ್ಲ ಭಾರತದ ಪಾಲಿಗೆ ಇದೊಂದು ಅಪರೂಪದ ಆಪ್​ ಆಗಿರಲಿದೆ ಎಂದಿದ್ದಾರೆ. ಈ ಆಪ್ ಮೂಲಕ ಅಪ್ಪು ಅವರ ಸೇವೆ, ಕೆಲಸಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಜೊತೆಗೆ ಇತರರಿಗೆ ಸ್ಪೂರ್ತಿ ತುಂಬುವ, ಅವಕಾಶ ನೀಡುವ ಅಪ್ಲಿಕೇಶನ್ ಆಗಿರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಪ್ಪು ಸ್ಮರಣೆಯಲ್ಲಿ ಜನಸ್ನೇಹಿ ಅಪ್ಲಿಕೇಶನ್, ಶೀಘ್ರವೇ ಬಿಡುಗಡೆ

ಪ್ರೋಮೊನಲ್ಲಿ ಇರುವಂತೆ ಪಿಆರ್​​ಕೆ ಅಪ್ಲಿಕೇಶನ್ ಕೇವಲ ಅಪ್ಪು ಅವರ ಚಿತ್ರ, ವಿಡಿಯೋಗಳನ್ನು ಹೊಂದಿರುವ ಆಪ್ ಅಲ್ಲ. ಇಲ್ಲಿ ಕಂಟೆಂಟ್ ಕ್ರಿಯೇಟರ್​​ಗಳು ಪರಸ್ಪರ ತಮ್ಮ ಕೆಲಸವನ್ನು ಪ್ರದರ್ಶನಕ್ಕೆ ಇಡುವ, ಒಬ್ಬರಿಂದ ಮತ್ತೊಬ್ಬರು ಕಲಿಯುವ ಅವಕಾಶವೂ ಇದೆ. ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತೆ ಪ್ರತಿ ಅಭಿಮಾನಿಯ ಹೃದಯದಿಂದ – ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ… ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ ಫ್ಯಾನ್​​ಡಮ್ ಆಪ್ ಇದಾಗಿದೆ. ಈ ಅಪ್ಲಿಕೇಶನ್ ಅಕ್ಟೋಬರ್ 25 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sat, 18 October 25