ಅಪ್ಪು ಸ್ಮರಣೆಯಲ್ಲಿ ಜನಸ್ನೇಹಿ ಅಪ್ಲಿಕೇಶನ್, ಶೀಘ್ರವೇ ಬಿಡುಗಡೆ
Puneeth Rajkumar: ಅಕ್ಟೋಬರ್ 29ಕ್ಕೆ ಪುನೀತ್ ರಾಜ್ಕುಮಾರ್ ನಿಧನರಾಗಿ ನಾಲ್ಕು ವರ್ಷಗಳಾಗುತ್ತವೆ. ಇಂದಿಗೂ ಸಹ ಕನ್ನಡಿಗರು ಅಪ್ಪು ಪ್ರತಿದಿನ ಸ್ಮರಣೆ ಮಾಡುತ್ತಲೇ ಇದ್ದಾರೆ. ಇದೀಗ ಅಶ್ವಿನಿ ಪುನೀತ್ರಾಜ್ಕುಮಾರ್ ಅವರು ಅಪ್ಪು ಸ್ಮರಣೆಯಲ್ಲಿ ಜನಸ್ನೇಹಿ ಅಪ್ಲಿಕೇಶನ್ ಒಂದನ್ನು ಲೋಕಾರ್ಪಣೆ ಮಾಡಲು ಯೋಜನೆ ರೂಪಿಸಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಇತರೆ ಗಣ್ಯರು ಶೀಘ್ರವೇ ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಕಾಲವಾಗಿ ನಾಲ್ಕು ವರ್ಷಗಳಾದವು. ಆದರೆ ಇಂದಿಗೂ ಸಹ ಪುನೀತ್ ಅವರನ್ನು ಕನ್ನಡಿಗರು ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಎಷ್ಟೋ ಮನೆಗಳಲ್ಲಿ ಮಕ್ಕಳಿಗೆ ಊಟ ಮಾಡಿಸುವಾಗ ಅಪ್ಪು ಹಾಡು ಹಾಕಲಾಗುತ್ತದೆ. ರಸ್ತೆಯಲ್ಲಿ ಹೋದರೆ ಎಲ್ಲಿ ಕಣ್ಣು ಹಾಯಿಸಿದರು ಅಪ್ಪು ಅವರ ಚಿತ್ರಗಳು, ಪ್ರತಿಮೆಗಳು ರಾರಾಜಿಸುತ್ತವೆ. ಅಪ್ಪು ಅವರ ಸಿನಿಮಾಗಳಿಂದ ಮಾತ್ರವಲ್ಲ ಅವರ ಅದ್ಭುತ ವ್ಯಕ್ತಿತ್ವ, ಸೇವೆಯ ಕಾರಣಗಳಿಂದಾಗಿ ಅವರು ಕೋಟ್ಯಂತರ ಜನರಿಗೆ ಹತ್ತಿರವಾಗಿದ್ದರು. ಇದೀಗ ಅಪ್ಪು ಅವರನ್ನು ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಾರ್ಯವೊಂದನ್ನು ಕೈಗೊಂಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ನೆನಪಿನಲ್ಲಿ ಅಪ್ಲಿಕೇಶನ್ ಒಂದನ್ನು ಹೊರತರಲು ಸಜ್ಜಾಗಿದ್ದಾರೆ. ಕೆಲ ಉತ್ಸಾಹಿ ತಂಡದೊಂದಿಗೆ ಈಗಾಗಲೇ ಅಪ್ಲಿಕೇಶನ್ ಒಂದನ್ನು ರೂಪಿಸಿದ್ದು ಶೀಘ್ರವೇ ಅದನ್ನು ಲೋಕಾರ್ಪಣೆ ಮಾಡಲಾಗುವುದು. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್ಗೆ ‘ಪಿಆರ್ಕೆ’ ಎಂದು ಹೆಸರಿಡಲಾಗಿದ್ದು, ಅಪ್ಪು ಅವರ ಪುಣ್ಯ ಸ್ಮರಣೆಯ ದಿನವಾದ ಅಕ್ಟೋಬರ್ 29ರಂದು ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡುವ ಯೋಜನೆ ಇದ್ದಂತಿದೆ.
ಇದನ್ನೂ ಓದಿ:‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಪುನೀತ್ ರಾಜ್ಕುಮಾರ್: ಜೀ5 ಒಟಿಟಿಯಲ್ಲಿ ಅ.31ರಿಂದ ಪ್ರಸಾರ
ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಈ ಅಪ್ಲಿಕೇಶನ್ ಅನ್ನು ಬಳಸುವ ಯೋಜನೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಇದೆ. ಈ ಅಪ್ಲಿಕೇಶನ್ನ ಲೋಕಾರ್ಪಣೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರನ್ನೂ ಸಹ ಆಹ್ವಾನಿಸುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿರುವ ಜೊತೆಗೆ, ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಸಹ ಈ ಅಪ್ಲಿಕೇಶನ್ ಒಳಗೊಂಡಿರುವ ಸಾಧ್ಯತೆ ಇದೆ. ಅಪ್ಲಿಕೇಶನ್ ಲೋಕಾರ್ಪಣೆಗೊಂಡ ಬಳಿಕವಷ್ಟೆ ಈ ಬಗ್ಗೆ ಪೂರ್ಣ ಮಾಹಿತಿ ಹೊರಬೀಳಲಿದೆ.
ಪುನೀತ್ ರಾಜ್ಕುಮಾರ್ ಅವರು ಅಕ್ಟೋಬರ್ 29, 2021 ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನ ಹೊಂದಿದರು. ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಲಾಗಿದೆ. ಅವರ ಜನ್ಮದಿನ ಹಾಗೂ ಪುಣ್ಯ ಸ್ಮರಣೆಯ ದಿನದಂದು ಲಕ್ಷಾಂತರ ಜನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮತ್ತು ನೇತ್ರದಾನ, ರಕ್ತದಾನ ಇನ್ನಿತರೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Tue, 14 October 25




