‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಪುನೀತ್ ರಾಜ್‌ಕುಮಾರ್: ಜೀ5 ಒಟಿಟಿಯಲ್ಲಿ ಅ.31ರಿಂದ ಪ್ರಸಾರ
ಜೀ5 ಒಟಿಟಿಯಲ್ಲಿ ‘ಮಾರಿಗಲ್ಲು’ ವೆಬ್ ಸರಣಿ ಅನೌನ್ಸ್ ಆದಾಗಲೇ ಅಭಿಮಾನಿಗಳಲ್ಲಿ ಕೌತುಕ ಮೂಡಿತ್ತು. ಈಗ ಈ ವೆಬ್ ಸರಣಿಯ ಕೌತುಕ ಭರಿತ ಟೀಸರ್ ಬಿಡುಗಡೆ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದರಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರ ಕೂಡ ಕಾಣಿಸಿರುವುದು ವಿಶೇಷ. ಈ ವೆಬ್ ಸೀರಿಸ್ ಬಗ್ಗೆ ಇಲ್ಲಿದೆ ಮಾಹಿತಿ..

‘ಜೀ5 ಒಟಿಟಿ’ (Zee5) ಮತ್ತು ‘ಪಿಆರ್‌ಕೆ ಪ್ರೊಡಕ್ಷನ್ಸ್’ ಒಂಟಿಯಾಗಿ ‘ಮಾರಿಗಲ್ಲು’ ವೆಬ್ ಸರಣಿ ನಿರ್ಮಿಸಿವೆ. ಈ ವೆಬ್ ಸೀರಿಸ್ ಅಕ್ಟೋಬರ್ 31ರಿಂದ ಪ್ರಸಾರ ಆಗಲಿದೆ. zee5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಕುತೂಹಲ ಮೂಡಿಸಲು ಈಗ ‘ಮಾರಿಗಲ್ಲು’ ವೆಬ್ ಸರಣಿ (Maarigallu Web Series) ಟೀಸರ್ ರಿಲೀಸ್ ಮಾಡಲಾಗಿದೆ. ನಟ ಧನಂಜಯ ನಿರೂಪಣೆಯ ಧ್ವನಿಯೊಂದಿಗೆ ಟೀಸರ್ ಆರಂಭ ಆಗುತ್ತದೆ. ಇದರಲ್ಲಿ ಕದಂಬ ರಾಜವಂಶದ ಸ್ಥಾಪಕ ಹಾಗೂ ಕರ್ನಾಟಕದ ಮೊದಲ ರಾಜ ಮಯೂರ ಶರ್ಮಾ ಪಾತ್ರವಿದೆ. ಆ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಕಾಣಿಸಿಕೊಂಡಿರುವುದು ವಿಶೇಷ.
‘ಮಾರಿಗಲ್ಲು’ ಟೀಸರ್ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾತ್ರ ಇರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಈ ವೆಬ್ ಸರಣಿಯಲ್ಲಿ ಇರಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ತಿಳಿಸುತ್ತದೆ. ಕದಂಬರ ಕಾಲದ ನಿಧಿಯನ್ನು ಹುಡುಕಲು ಹೊರಟ ಶಿರಸಿ ಯುವಕರ ಕಹಾನಿಯನ್ನು ಇದರಲ್ಲಿ ತೋರಿಸಲಾಗುತ್ತಿದೆ.
ಈ ವೆಬ್ ಸರಣಿಯಲ್ಲಿ ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳು ಇರಲಿವೆ. ಶಿರಸಿಯ ಬೇಡರ ವೇಷ ಕೂಡ ಈ ವೆಬ್ ಸೀರೀಸ್ನಲ್ಲಿ ವಿಶೇಷವಾಗಿ ಕಾಣಿಸಲಿದೆ ಎಂದು ಟೀಮ್ ಹೇಳಿದೆ. ಇದರಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಪ್ರವೀಣ್ ತೇಜ್, ಎ.ಎಸ್. ಸೂರಜ್, ಪ್ರಶಾಂತ್ ಸಿದ್ದಿ, ನಿನಾದ ಹೃತ್ಸಾ ಮುಂತಾದವರು ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ.
‘ಮಾರಿಗಲ್ಲು’ ವೆಬ್ ಸರಣಿ ಟೀಸರ್:
‘ಮಾರಿಗಲ್ಲು’ ವೆಬ್ ಸರಣಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಿರ್ಮಿಸಿದ್ದಾರೆ. ‘ಇದು ನಿಗೂಢತೆ, ಭಕ್ತಿ ಹಾಗೂ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಸಾರವನ್ನು ಹೊಂದಿರುವ ಕಥೆಯಾಗಿದೆ. ಈ ಕಥೆಯನ್ನು ಹೇಳಲು ಜೀ5 ಜೊತೆ ಸಹಯೋಗ ಮಾಡುವುದು ಇನ್ನಷ್ಟು ಅರ್ಥಪೂರ್ಣ ಆಗಿಸುತ್ತದೆ. ಏಕೆಂದರೆ ಅದು ಅಪ್ಪು ನಂಬಿದ್ದರ ಚೈತನ್ಯವನ್ನು ಸಾಕಾರಗೊಳಿಸುತ್ತದೆ’ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಗೆಲ್ಲಲು ಪುನೀತ್ ಆಶೀರ್ವಾದವೂ ಕಾರಣ; ಹಳೆಯ ವಿಡಿಯೋ ವೈರಲ್
ದೇವರಾಜ್ ಪೂಜಾರಿ ಅವರು ನಿರ್ದೇಶನ ಮಾಡಿದ್ದಾರೆ. ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಲ್.ವಿ. ಮುತ್ತು ಹಾಗೂ ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿ ಹಿರೇಮಠ್ ಅವರು ಸೌಂಡ್ ಡಿಸೈನ್ ಜವಾಬ್ದಾರಿ ನಿಭಾಯಿಸಿದ್ದಾರೆ. ‘ನಾವು ಇದುವರೆಗೂ ಮಾಡಿದ ಯಾವುದೇ ವೆಬ್ ಸರಣಿಗಿಂತ ಮಾರಿಗಲ್ಲು ಭಿನ್ನವಾಗಿದೆ. ದೈವಿಕ ಜಾನಪದ ಥ್ರಿಲ್ಲರ್ ಇದು’ ಎಂದು ಜೀ5 ಬಿಸ್ನೆಸ್ ಮುಖ್ಯಸ್ಥ ದೀಪಕ್ ಶ್ರೀರಾಮುಲು ಹೇಳಿದ್ದಾರೆ. ಈ ವೆಬ್ ಸರಣಿಯಲ್ಲಿ ನಟಿಸಿದ್ದಕ್ಕೆ ರಂಗಾಯಣ ರಘು ಅವರಿಗೆ ಖುಷಿ ಇದೆ. ‘ಈ ಸರಣಿಯ ಪ್ರತಿಯೊಂದು ಪಾತ್ರವು ಮಾನವೀಯತೆ ಮತ್ತು ಸಂಘರ್ಷದ ಛಾಯೆಗಳನ್ನು ಹೊಂದಿದೆ’ ಎಂದು ರಂಗಾಯಣ ರಘು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




