
ಸರೋಜಾ ದೇವಿ ಅವರು ನಿಧನ ಹೊಂದಿರೋದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸುಮಾರು ಏಳು ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಬಹುಶಃ ಇಂದು ಪುನೀತ್ ರಾಜ್ಕುಮಾರ್ ನಮ್ಮ ಜೊತೆ ಇದ್ದಿದ್ದರೆ ಅವರು ತುಂಬಾನೇ ಬೇಸರ ಮಾಡಿಕೊಳ್ಳುತ್ತಿದ್ದರು ಎಂದರೂ ತಪ್ಪಾಗಲಾರದು. ಇದಕ್ಕೆ ಕಾರಣ ಪುನೀತ್ ರಾಜ್ಕುಮಾರ್ ಹಾಗೂ ಸರೋಜಾ ದೇವಿ (B Saroja Devi) ಜೊತೆ ಇದ್ದ ಬಾಂಧವ್ಯ. ಸರೋಜಾ ದೇವಿಯನ್ನು ತಾಯಿ ರೀತಿಯಲ್ಲೇ ಪುನೀತ್ ಕಂಡಿದ್ದರು.
ಸರೋಜಾ ದೇವಿ ಅವರು ಪುನೀತ್ ರಾಜ್ಕುಮಾರ್ ಚಿಕ್ಕ ವಯಸ್ಸು ಇದ್ದಾಗಿನಿಂದಲೂ ನೋಡುತ್ತಾ ಬರುತ್ತಿದ್ದಾರೆ. ಸೆಟ್ಗೆ ರಾಜ್ಕುಮಾರ್ ಜೊತೆ ಅಪ್ಪು ಕೂಡ ಬರುತ್ತಿದ್ದರು. ಆಗ ಸರೋಜಾ ದೇವಿ ಅವರು ಎತ್ತಿ ಆಡಿಸುತ್ತಿದ್ದರು. ಪುನೀತ್ನ ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಿದ್ದರು. ಈ ಬಗ್ಗೆ ಹಿರಿಯ ನಿರ್ದೇಶಕ ಭಗವಾನ್ ಮಾತನಾಡಿದ್ದರು.
‘ಪಾರ್ವತಮ್ಮ ಅವರು ಸರೋಜಾ ದೇವಿಯನ್ನು ಕರೆದರು. ಅಪ್ಪುನ ನೀನು ಎಷ್ಟು ಚೆನ್ನಾಗಿ ಹ್ಯಾಂಡಲ್ ಮಾಡ್ತೀಯಾ. ನಿನಗೆ ಅವನು ತುಂಬಾನೇ ಹೊಂದಿಕೊಂಡಿದ್ದಾನೆ ಎಂದು ಪಾರ್ವತಮ್ಮ ಸರೋಜಾ ದೇವಿಗೆ ಹೇಳಿದ್ದರು’ ಎಂದಿದ್ದರು ಭಗವಾನ್. ಪುನೀತ್ ಹಾಗೂ ಸರೋಜಾ ದೇವಿ ನಟಿಸಿದ ‘ಯಾರಿವನು’ ಸಿನಿಮಾಗೆ ಭಗವಾನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮಾಡುವಂತೆ ಹೇಳಿದ್ದು ಪಾರ್ವತಮ್ಮ.
‘ಪುನೀತ್ ಹಾಗೂ ಸರೋಜಾ ದೇವಿ ಬಾಂಧವ್ಯ ನೋಡಿ ನನಗೆ ಒಂದು ಕಥೆ ಮಾಡುವಂತೆ ಪಾರ್ವತಮ್ಮ ಹೇಳಿದರು. ಆ ಸಮಯಕ್ಕೆ ಸರಿಯಾಗಿ ಒಂದು ಇಂಗ್ಲಿಷ್ ಸಿನಿಮಾ ಬಂತು. ಉದಯ್ ಶಂಕರ್ ಅವರಿಗೆ ಆ ಸಿನಿಮಾ ತೋರಿಸಿದೆ. ಉದಯ್ ಶಂಕರ್ ಕಥೆ ಬರೆದರು. ಅದುವೇ ಯಾರಿವನು’ ಎಂದಿದ್ದರು ಭಗವಾನ್.
‘ಆ ಚಿತ್ರದಲ್ಲಿ ಪುನೀತ್ ತುಂಬ ಒಳ್ಳೆಯ ರೀತಿಯಲ್ಲಿ ನಟಿಸಿದ್ದ. ಶ್ರೀನಾಥ್ ಜೊತೆ ಇರುವಾಗ ಶ್ರೀನಾಥ್ ಮಗನಂತೆ, ರಾಜ್ಕುಮಾರ್ ಜೊತೆ ರಾಜ್ಕುಮಾರ್ ಮಗನಂತೆ ನಟಿಸಿದ್ದ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಈ ರೀತಿ ಯಾವುದೇ ಕಲಾವಿದ ನಟಿಸಿದಾಗ ಎಷ್ಟು ಖುಷಿ ಆಗುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು ಭಗವಾನ್.
ಇದನ್ನೂ ಓದಿ: ಈಜುಡುಗೆ ತೊಡಲ್ಲ, ಸ್ಲೀವ್ಲೆಸ್ ಹಾಕಲ್ಲ; ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ
‘ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ ಎಂಬ ಹಾಡಿನ ಶೂಟ್ ದೃಶ್ಯ. ಇದನ್ನು ನೋಡಿ ಸರೋಜಾ ದೇವಿ ಅವರು ‘ಈ ಮಗು ನನ್ನ ಮಗವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು. ಆಕೆ ಏಳು ಭಾಷೆಯ ತಾರೆ. ಅಂಥವರ ಜೊತೆ ಅಪ್ಪು ನಟಿಸಿದ್ದ’ ಎಂದು ಭಗವಾನ್ ವಿವರಿಸಿದ್ದರು. ಪುನೀತ್ ಅವರ ‘ನಟಸಾರ್ವಭೌಮ’ ಚಿತ್ರದಲ್ಲಿ ಸರೋಜಾ ದೇವಿ ಅತಿಥಿ ಪಾತ್ರ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.