ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; ಅದೇ ಖುಷಿಯಲ್ಲಿ ‘ಕೆಜಿಎಫ್ 3’ ಬಗ್ಗೆ ನಿರ್ಮಾಪಕರ ಮಾತು

‘ಕೆಜಿಎಫ್​: ಚಾಪ್ಟರ್​ 2’ ಮತ್ತು ‘ಕಾಂತಾರ’ ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಹಿರಿಮೆ ಬಂದಿದೆ. ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಈ ಸಿನಿಮಾಗಳಿಗೆ ನ್ಯಾಷನಲ್​ ಅವಾರ್ಡ್​ ಸಿಕ್ಕಿದೆ. ಈ ಚಿತ್ರಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; ಅದೇ ಖುಷಿಯಲ್ಲಿ ‘ಕೆಜಿಎಫ್ 3’ ಬಗ್ಗೆ ನಿರ್ಮಾಪಕರ ಮಾತು
ಪ್ರಶಸ್ತಿ ಸ್ವೀಕರಿಸಿದ ವಿಜಯ್​ ಕಿರಗಂದೂರು

Updated on: Oct 08, 2024 | 9:57 PM

ದೆಹಲಿಯಲ್ಲಿ ಇಂದು (ಅಕ್ಟೋಬರ್​ 8) 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕನ್ನಡ ಸಿನಿಮಾಗಳು ಕೂಡ ಈ ಬಾರಿ ಅಬ್ಬರಿಸಿವೆ. ಅದರಲ್ಲೂ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಒಟ್ಟು 4 ಪ್ರಶಸ್ತಿಗಳು ಸಿಕ್ಕಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಷಯ. ‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ‘ಕೆಜಿಎಫ್​ 3’ ಕುರಿತು ಕೂಡ ಮಾತನಾಡಿದ್ದಾರೆ.

‘ಕೆಜಿಎಫ್​ 2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಬಂದಿರುವುದಕ್ಕೆ ತುಂಬ ಸಂತಸ ಆಗುತ್ತಿದೆ. ಅದೇ ಸಿನಿಮಾಗೆ ಕೆಲಸ ಮಾಡಿದ ಸಾಹಸ ನಿರ್ದೇಶಕರಿಗೂ ಪ್ರಶಸ್ತಿ ಬಂದಿದೆ. ಅದೇ ರೀತಿ ‘ಕಾಂತಾರ’ ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಪ್ರಶಸ್ತಿ ಪಡೆದಿದೆ. ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ರಿಷಬ್​ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಹೀಗೆ ಒಂದೇ ವರ್ಷದಲ್ಲಿ ನಮ್ಮ ಎರಡು ಸಿನಿಮಾಗಳಿಂದ 4 ಅವಾರ್ಡ್​ ಸಿಕ್ಕಿದ್ದಕ್ಕೆ ಬಹಳ ಸಂತೋಷ ಆಗುತ್ತಿದೆ’ ಎಂದಿದ್ದಾರೆ ವಿಜಯ್​ ಕಿರಗಂದೂರು.

Vijay Kiragandur on KGF3: KGF3 ಬಗ್ಗೆ ಹಿಂಟ್ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರ್ | #TV9D

‘ಕಾಂತಾರ ಮತ್ತು ಕೆಜಿಎಫ್​ 2 ಚಿತ್ರತಂಡದ ಎಲ್ಲರಿಗೂ ಇಲ್ಲಿಂದಲೇ ನಾನು ಸಂತಸ ಹಂಚಲು ಇಷ್ಟಪಡುತ್ತೇನೆ. ಈ ಸಿನಿಮಾಗಳನ್ನು ಪ್ರೋತ್ಸಾಹಿಸಿದ ಕನ್ನಡಿಗರು ಮತ್ತು ಇಡೀ ಭಾರತದ ಪ್ರೇಕ್ಷಕರಿಗೆ ನಾನು ಕೃತಜ್ಞತೆ ಸಲ್ಲಿಸಿತ್ತೇನೆ. ರಾಷ್ಟ್ರ ಪಶಸ್ತಿ ಪಡೆದ ಎಲ್ಲ ಕನ್ನಡಿಗರಿಗೂ ಅಭಿನಂದನೆಗಳು’ ಎಂದು ವಿಜಯ್​ ಕಿರಗಂದೂರು ಅವರು ಹೇಳಿದ್ದಾರೆ. ರಿಷಬ್​ ಶೆಟ್ಟಿ ಅವರು ದೆಹಲಿಯಲ್ಲಿ ಅತ್ಯುತ್ತಮ ನಟ ನ್ಯಾಷನಲ್​ ಅವಾರ್ಡ್​ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಪಂಚೆ ಧರಿಸಿ ವೇದಿಕೆಗೆ ಬಂದು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್​ ಶೆಟ್ಟಿ

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ಈಗ ‘ಕಾಂತಾರ: ಚಾಪ್ಟರ್​ 2’, ‘ಕೆಜಿಎಫ್​ 3’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಆ ಬಗ್ಗೆಯೂ ವಿಜಯ್ ಕಿರಗಂದೂರು ಅವರು ಮಾತನಾಡಿದ್ದಾರೆ. ‘ಇನ್ನೇನು 4-5 ತಿಂಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 3’ ಚಿತ್ರದ ಬಗ್ಗೆ ಅಪ್​ಡೇಟ್​ ನೀಡುತ್ತೇವೆ. ‘ಕಾಂತಾರ 2’ ಸಿನಿಮಾಗೆ ತುಂಬ ಚೆನ್ನಾಗಿ ಶೂಟಿಂಗ್​ ಆಗುತ್ತಿದೆ. ರಿಷಬ್​ ಅವರು ನಟನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಇಡೀ ತಂಡ ಕುಂದಾಪುರದಲ್ಲಿ ಕಷ್ಟಪಡುತ್ತಿದೆ. ಮುಂದಿನ ಆಗಸ್ಟ್​ನಲ್ಲಿ ನೀವು ಕಾಂತಾರ ಸಿನಿಮಾವನ್ನು ನಿರೀಕ್ಷಿಸಬಹುದು’ ಎಂದು ವಿಜಯ್​ ಕಿರಗಂದೂರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us