ಕೊವಿಡ್ ಎರಡನೇ ಅಲೆ ಸೃಷ್ಟಿಸಿದ ತೊಂದರೆಗಳು ಒಂದೆರಡಲ್ಲ. ಸರ್ಕಾರ ಹೂಡಿರುವ ಲಾಕ್ಡೌನ್ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಕೆಲಸಗಳು ನಿಂತಿರುವ ಕಾರಣ ಚಿತ್ರರಂಗದ ಕಾರ್ಮಿಕರು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹೀಗಾಗಿ, ಸಾಕಷ್ಟು ಸೆಲೆಬ್ರಿಟಿಗಳು ಸಿನಿಮಾ ಕಾರ್ಮಿಕರ ಸಹಾಯಕ್ಕೆ ನಿಂತಿದ್ದಾರೆ. ಈಗ ಸ್ಯಾಂಡಲ್ವುಡ್ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಸಹಾಯಕ್ಕೆ ಮುಂದಾಗಿದ್ದು, ಚಲನ ಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 32 ಲಕ್ಷ ಹಣ ನೀಡಿದೆ.
ಕಾರ್ಮಿಕ ಒಕ್ಕೂಟದ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸಹಾಯ ಆಗುವಂತೆ ಹಣ ನೀಡಲಾಗಿದೆ. 21 ವಿಭಾಗದ 3,200 ಕಾರ್ಮಿಕರಿಗೆ ತಲಾ 1,000 ರೂ ಸಿಗಲಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಸಹಾಯಕ್ಕೆ ಮುಂದಾಗಿದ್ದಾರೆ.
ಸಿನಿಮಾ ಇಂಡಸ್ಟ್ರಿ ಪರವಾಗಿ ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾಗೊವಿಂದು ಹಾಗೂ ಚಲನ ಚಿತ್ರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್, ವಿಜಯ್ ಕೆಲಸಕ್ಕೆ ಧನ್ಯವಾದ ಹೇಳಿದ್ದಾರೆ. ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರು ಕಾರ್ಮಿಕ ಒಕ್ಕೂಟಕ್ಕೆ 10 ಲಕ್ಷ ರೂಪಾಯಿ ನೀಡಿದ್ದರು. ಯಶ್ ಕೂಡ ಕಷ್ಟದಲ್ಲಿರುವ ಸಿನಿಮಾ ತಂತ್ರಜ್ಞರ ಸಹಾಯಕ್ಕೆ ಮುಂದಾಗಿದ್ದರು. 3000 ತಂತ್ರಜ್ಞರಿಗೆ ತಲಾ 5000 ರೂಪಾಯಿ ನೀಡುವ ಬಗ್ಗೆ ಅವರು ಘೋಷಣೆ ಮಾಡಿದ್ದರು.
ಹೈ ಬಜೆಟ್ ಸಿನಿಮಾಗಳ ಯಶಸ್ವಿ ನಿರ್ಮಾಪಕನಾಗಿ ಮಾತ್ರವಲ್ಲದೇ ಹೃದಯ ಶ್ರೀಮಂತಿಕೆಯ ಕಾರಣದಿಂದಲೂ ವಿಜಯ್ ಕಿರಗಂದೂರು ಜನಮೆಚ್ಚುಗೆ ಗಳಿಸುತ್ತಿದ್ದಾರೆ. ಸದ್ಯ ಅವರ ನಿರ್ಮಾಣದಲ್ಲಿ ‘ಕೆಜಿಎಫ್: ಚಾಪ್ಟರ್ 2’, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾಗಳು ಸಿದ್ಧವಾಗುತ್ತಿವೆ. ಈ ಚಿತ್ರಗಳ ಮೇಲೆ ಬಹುಭಾಷೆಯ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಸೇರಿದಂತೆ ಹಲವರು ಜನಪರ ಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂಕಷ್ಟದಲ್ಲಿ ಇರುವವರಿಗೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಸದ್ದಿಲ್ಲದೇ ಮಾಡಿದ ಸಹಾಯಗಳು ಒಂದೆರಡಲ್ಲ