ಸಂಕಷ್ಟದಲ್ಲಿ ಇರುವವರಿಗೆ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ಸದ್ದಿಲ್ಲದೇ ಮಾಡಿದ ಸಹಾಯಗಳು ಒಂದೆರಡಲ್ಲ

Vijay Kiraganduru: ಕಳೆದ ವರ್ಷ ಕೊರೊನಾ ವೈರಸ್​ ಕಾಟ ಆರಂಭ ಆದಾಗಲೇ ವಿಜಯ್​ ಕಿರಗಂದೂರು ಜನಪರ ಕಾರ್ಯಗಳನ್ನು ಶುರು ಮಾಡಿದ್ದರು. ಈ ವರ್ಷವೂ ಅವರು ಅನೇಕರಿಗೆ ಸಹಾಯಹಸ್ತ ಚಾಚಿದ್ದಾರೆ.

ಸಂಕಷ್ಟದಲ್ಲಿ ಇರುವವರಿಗೆ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ಸದ್ದಿಲ್ಲದೇ ಮಾಡಿದ ಸಹಾಯಗಳು ಒಂದೆರಡಲ್ಲ
ವಿಜಯ್ ಕಿರಗಂದೂರು
Follow us
|

Updated on: Jun 04, 2021 | 5:37 PM

ಕೊರೊನಾ ವೈರಸ್​ನಿಂದ ಆಗಿರುವ ಅವಾಂತರಗಳು ಒಂದೆರಡಲ್ಲ. ಒಂದು ಕಡೆ ಜನರು ಆರೋಗ್ಯ ಸಮಸ್ಯೆಯಿಂದ ಬಳಲುವಂತಾದರೆ, ಇನ್ನೊಂದೆಡೆ ಆರ್ಥಿಕ ಸಂಕಷ್ಟ. ಲಾಕ್​ಡೌನ್​ ಜಾರಿ ಆಗಿರುವ ಈ ಸಂದರ್ಭದಲ್ಲಿ ಬಡವರ, ಕಾರ್ಮಿಕರ ಕಷ್ಟ ಹೇಳತೀರದು. ಈ ನಡುವೆ ಅನೇಕರು ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಅದೇ ರೀತಿ ‘ಕೆಜಿಎಫ್​’ ಸಿನಿಮಾ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಕೂಡ ಹಲವರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಸದ್ದಿಲ್ಲದಂತೆಯೇ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಕಳೆದ ವರ್ಷ ಕೊರೊನಾ ವೈರಸ್​ ಕಾಟ ಆರಂಭ ಆದಾಗಲೇ ವಿಜಯ್​ ಕಿರಗಂದೂರು ಅವರು ತಮ್ಮ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯಿಂದ ನಿರ್ಮಾಣ ಆಗುತ್ತಿದ್ದ ‘ಕೆಜಿಎಫ್ 2​’ ಮತ್ತು ‘ಯುವರತ್ನ’ ಚಿತ್ರತಂಡದ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಿದ್ದರು. ಚಿತ್ರರಂಗದ ಹಲವರಿಗೂ ಸಹಾಯ ಮಾಡಿದ್ದರು. ಈ ವರ್ಷವೂ ವಿಜಯ್​ ಕಿರಗಂದೂರು ಅವರು ತಮ್ಮ ಸೇವೆ ಮುಂದುವರಿಸಿದ್ದಾರೆ.

ವಿಜಯ್​ ಕಿರಗಂದೂರು ಅವರು ಮೂಲತಃ ಮಂಡ್ಯದವರು. ಹಾಗಾಗಿ ತಮ್ಮ ತವರು ಜಿಲ್ಲೆಯ ಆಸ್ಪತ್ರೆಗೆ ಎರಡು ಆಕ್ಸಿಜನ್​ ಪ್ಲಾಂಟ್​ಗಳನ್ನು ನೀಡಿದ್ದಾರೆ. ಅಲ್ಲದೆ, ಆಕ್ಸಿಜನ್​ ಸಿಲಿಂಡರ್​ ಹಾಗೂ ಉತ್ತಮ ಸೌಲಭ್ಯಗಳುಳ್ಳ ಬೆಡ್​ಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡುತ್ತಿದ್ದಾರೆ.

‘ಹೊಂಬಾಳೆ’ ಸಂಸ್ಥೆಯಲ್ಲಿ ಕೆಲಸ ಮಾಡುವ 600ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಕೊರೊನಾ ಲಸಿಕೆ ಹಾಕಿಸಿದ್ದಾರೆ. ಆ ಕುಟುಂಬದವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಹಾಗಂತ ಕೇವಲ ಕರ್ನಾಟಕದಲ್ಲಿ ಇರುವವರಿಗೆ ಮಾತ್ರ ಸಹಾಯ ಮಾಡಿ ಅವರು ಸುಮ್ಮನಾಗಿಲ್ಲ. ತಮ್ಮದೇ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ತೆಲುಗಿನ ‘ಸಲಾರ್’ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 150ಕ್ಕೂ ಅಧಿಕ ಸದಸ್ಯರಿಗೂ ಧನ ಸಹಾಯ ಮಾಡಿದ್ದಾರೆ.

ಹೈ ಬಜೆಟ್​ ಸಿನಿಮಾಗಳ ಯಶಸ್ವಿ ನಿರ್ಮಾಪಕನಾಗಿ ಮಾತ್ರವಲ್ಲದೇ ಹೃದಯ ಶ್ರೀಮಂತಿಕೆಯ ಕಾರಣದಿಂದಲೂ ವಿಜಯ್​ ಕಿರಗಂದೂರು ಜನಮೆಚ್ಚುಗೆ ಗಳಿಸುತ್ತಿದ್ದಾರೆ. ಸದ್ಯ ಅವರ ನಿರ್ಮಾಣದಲ್ಲಿ ‘ಕೆಜಿಎಫ್​: ಚಾಪ್ಟರ್​ 2’, ಪ್ರಭಾಸ್​ ನಟನೆಯ ‘ಸಲಾರ್​’ ಸಿನಿಮಾಗಳು ಸಿದ್ಧವಾಗುತ್ತಿವೆ. ಈ ಚಿತ್ರಗಳ ಮೇಲೆ ಬಹುಭಾಷೆಯ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ ಸೇರಿದಂತೆ ಹಲವರು ಜನಪರ ಕಾರ್ಯ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟ ಯಶ್​ ಅವರು ಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರಿಗೆ ತಲಾ 5 ಸಾವಿರ ರೂಪಾಯಿ ನೀಡಲು ಮುಂದಾದರು.

ಇದನ್ನೂ ಓದಿ:

KGF Chapter 2: ಕೆಜಿಎಫ್​ 2 ಚಿತ್ರ ತಂಡದಿಂದ ಮಹತ್ವದ ನಿರ್ಧಾರ; ಅಭಿಮಾನಿಗಳಿಗೆ ಖುಷಿಯೋ, ಬೇಸರವೋ? 

Yash: ಸಿನಿಮಾ ತಂತ್ರಜ್ಞರಿಗೆ ಯಶ್​ ದೊಡ್ಡ ಸಹಾಯ; 1.5 ಕೋಟಿ ರೂ. ನೆರವು ನೀಡುತ್ತಿರುವ ರಾಕಿಂಗ್​ ಸ್ಟಾರ್​