SPB Birth Anniversary: ಕೆ. ಕಲ್ಯಾಣ್ ನೆನಪಿನ ಪ್ರತಿ ಪುಟದಲ್ಲೂ ಎಸ್ಪಿಬಿ ಸದಾ ಜೀವಂತ
SP Balasubrahmanyam Birthday: ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಗೀತರಚನಕಾರ ಕೆ. ಕಲ್ಯಾಣ್ ಅವರದ್ದು ಕನ್ನಡ ಚಿತ್ರರಂಗದಲ್ಲಿ ಹಿಟ್ ಕಾಂಬಿನೇಷನ್. ಮೇರು ಗಾಯಕನ ಹುಟ್ಟುಹಬ್ಬದಂದು ಕಲ್ಯಾಣ್ ಅವರು ತಮ್ಮ ನೆನಪಿನ ಬುತ್ತಿ ತೆರೆದಿದ್ದಾರೆ.
ಐದೂವರೆ ದಶಕಗಳಿಗೂ ಹೆಚ್ಚುಕಾಲ ಭಾರತೀಯ ಸಿನಿಮಾ ಸಂಗೀತಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ. ಈ ದೊಡ್ಡ ಜರ್ನಿಯಲ್ಲಿ ಅವರು ಅನೇಕ ಸಂಗೀತ ನಿರ್ದೇಶಕರು ಮತ್ತು ಗೀತರಚನಕಾರರ ಜೊತೆ ಒಡನಾಡಿದರು. ಕನ್ನಡದಲ್ಲಿ ಕೆ. ಕಲ್ಯಾಣ್ ಬರೆದ ಬಹುತೇಕ ಗೀತೆಗಳಿಗೆ ಧ್ವನಿ ನೀಡಿದ್ದೇ ಎಸ್ಪಿಬಿ. ಇಬ್ಬರ ಕಾಂಬಿನೇಷನ್ನಲ್ಲಿ ಬಂದು ಅನೇಕ ಹಾಡುಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. 25 ವರ್ಷಗಳ ಕಾಲ ಎಸ್ಪಿ ಬಾಲಸುಬ್ರಹ್ಮಣ್ಯಂ ಜೊತೆ ನಂಟು ಹೊಂದಿದ್ದ ಕಲ್ಯಾಣ್ ಅವರು ಇಂದು ಮಹಾನ್ ಗಾಯಕನ ಜನ್ಮದಿನ ಕುರಿತು ಕೆಲವು ಮಾತುಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಅವರು ನಮ್ಮನ್ನು ಅಗಲಿಲ್ಲ!
‘ಮೊದಲೆಲ್ಲ ನಾನು ಎಸ್ಪಿಬಿ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎನಿಸುತ್ತಿತ್ತು. ಆದರೆ ಈಗ ಹಾಗೆ ಅನಿಸುತ್ತಿಲ್ಲ. ಅವರು ಸದಾ ನಮ್ಮ ಜೊತೆಯಲ್ಲೇ ಇದ್ದಾರೆ ಎಂದುಕೊಂಡಿದ್ದೇನೆ. ಇದು ತುಂಬ ನೈಜವಾದ ಫೀಲಿಂಗ್. ಅವರು ಎಲ್ಲೋ ಚೆನ್ನೈ, ಮುಂಬೈ, ಹೈದರಾಬಾದ್ನಲ್ಲಿ ಹಾಡುತ್ತಿರಬಹುದು. ಫಾರಿನ್ ಟ್ರಿಪ್ಗೆ ಹೋಗಿರಬಹುದು ಅಂದುಕೊಂಡು, ನಮ್ಮೊಳಗೆ ಅವರು ಇದ್ದಾರೆ ಎಂದು ಭಾವಿಸಿದ್ದೇನೆ. ಸಾಧಕರು ಭೌತಿಕವಾಗಿ ಇಲ್ಲದಿದ್ದರೂ ಅವರು ಅಜರಾಮರರು. ಈಗ ಅವರನ್ನು ಮಾತನಾಡಿಸಬೇಕು ಎನಿಸಿದಾಗ ಅವರ ಅಪಾಯಿಂಟ್ಮೆಂಟ್ ಸಿಕ್ಕಿಲ್ಲ ಎಂದುಕೊಂಡು ಸುಮ್ಮನಿರಬೇಕು’ ಎನ್ನುತ್ತಾರೆ ಕಲ್ಯಾಣ್.
ನನ್ನ ಶೇ.90ರಷ್ಟು ಹಾಡಿಗೆ ಎಸ್ಬಿಪಿ ಧ್ವನಿ
‘ಒಮ್ಮೆ ವಿಷ್ಣುವರ್ಧನ್ ಮತ್ತು ಎಸ್ಪಿಬಿ ಅವರು ನಮ್ಮ ಮನೆಗೆ ಜೊತೆಯಾಗಿ ಬಂದರು. ಆಗ ನಡೆದ ಪ್ರೆಸ್ಮೀಟ್ನಲ್ಲಿ ಎಸ್ಪಿಬಿ ಒಂದು ಮಾತು ಹೇಳಿದರು. ನಾನು ಬರೆದ ಶೇ.90ರಷ್ಟು ಹಾಡಿಗೆ ತಾವೇ ಧ್ವನಿ ನೀಡಿರುವುದು ಎಂಬುದನ್ನು ವಿವರಿಸಿ ಸಂತಸಪಟ್ಟರು. ಅದು ನನಗೆ ಬಹಳ ಖುಷಿ ಆಯಿತು. ಅದು ನನ್ನ ಎಷ್ಟೋ ಜನ್ಮಗಳ ಸೌಭಾಗ್ಯ. ನನಗೆ ನಮ್ಮೂರ ಮಂದಾರ ಹೂವೆ ಮೊದಲ ಹಿಟ್ ಸಿನಿಮಾ. ಅದಕ್ಕೂ ಮುನ್ನ 44 ಸಿನಿಮಾಗಳಿಗೆ ಬರೆದಿದ್ದೆ. ಅದರಲ್ಲೂ ಅವರು ಹಾಡಿದ್ದರು. ಆದರೆ ನಮ್ಮೂರ ಮಂದಾರ ಹೂವೆ ಚಿತ್ರದ ಸಮಯದಲ್ಲಿ ಅವರೊಡನೆ ಆಪ್ತವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು’ ಎಂಬುದು ಕಲ್ಯಾಣ್ ಮಾತುಗಳು.
ಹಲವು ಬಗೆಯಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದರು
‘ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಚಂದ್ರಮುಖಿ ಪ್ರಾಣಸಖಿ ಚಿತ್ರಗಳು ಹಿಟ್ ಆದ ಬಳಿಕ ನಾನು ಬರೆಯುವ ಎಲ್ಲ ಗೀತೆಗಳಿಗೂ ಎಸ್ಪಿಬಿ ಅವರೇ ಹಾಡಬೇಕು ಎಂಬುದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಅವರು ಹಾಡಿದಾಗ ಆ ಸಾಹಿತ್ಯಕ್ಕೊಂದು ಹೊಸ ಜೀವ ಬರುತ್ತಿತ್ತು. ಅದಕ್ಕೆ ಧ್ವನಿ ಸಂಜೀವಿನಿ ಎನ್ನಬೇಕು. ಅವರ ಗಾಯನವನ್ನು ನಾವು ಹೊಗಳಿದಾಗ, ‘ಇಲ್ಲ ಇಲ್ಲ, ಅದು ನಿಮ್ಮ ಬರಹಕ್ಕೆ ಇರುವ ಶಕ್ತಿ’ ಎಂದುಬಿಡುತ್ತಿದ್ದರು. ರೆಕಾರ್ಡಿಂಗ್ ಬಳಿಕ ಅವರು ಎಷ್ಟೋ ಬಾರಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಏನೂ ಮಾತನಾಡದೇ ಒಂದೆರಡು ಗಂಟೆಗಳ ಬಳಿಕ ಅವರು ಸುಮ್ಮನೇ ಕುಳಿತ ಉದಾಹರಣೆ ಕೂಡ ಇದೆ. ಕೆಲವೊಮ್ಮೆ ರೆಕಾರ್ಡಿಂಗ್ ಆಗುತ್ತಿರುವಾಗ ಬೇರೆ ಭಾಷೆಯ ಟಾಪ್ ಗೀತರಚನಕಾರರಿಗೆ ಕರೆ ಮಾಡಿ ಕನ್ನಡದ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು’ ಎನ್ನುತ್ತಾರೆ ಕಲ್ಯಾಣ್.
ಭಾಷೆ ಬಗ್ಗೆ ಅಪಾರ ಗೌರವ-ಪ್ರೀತಿ
‘ಮೊದಲೆಲ್ಲ ನನಗೆ ರೆಕಾರ್ಡಿಂಗ್ ಸಮಯದಲ್ಲಿ ಸ್ಡುಡಿಯೋಗೆ ಹೋಗಲು ಸಾಧ್ಯವಾಗದೇ ಇದ್ದರೆ ಚಡಪಡಿಕೆ ಆಗುತ್ತಿತ್ತು. ಆದರೆ ಐದಾರು ಹಾಡಿಗೆ ಒಟ್ಟಿಗೆ ಕೆಲಸ ಮಾಡಿದ ಬಳಿಕ ಆ ಚಡಪಡಿಕೆ ಮಾಯವಾಯ್ತು. ಯಾಕೆಂದರೆ ಎಸ್ಪಿಬಿ ಯಾವುದೇ ಊರಿನಲ್ಲಿ ಹಾಡು ರೆಕಾರ್ಡ್ ಮಾಡುತ್ತಿದ್ದರೂ ಕೂಡ ಅಲ್ಲಿಂದ ಫೋನ್ ಮಾಡುತ್ತಿದ್ದರು. ಈ ಪದ ಸರಿಯಿದೆಯೇ ಎಂದು ಕೇಳುತ್ತಿದ್ದರು. ನಮಗಿಂತಲೂ ಚೆನ್ನಾಗಿ ಅವರಿಗೆ ಕನ್ನಡ ತಿಳಿದಿತ್ತು. ನಾನು ಹುಟ್ಟೋದಕ್ಕಿಂತ ಮುಂಚೆಯೇ ಕನ್ನಡ ಭಾಷೆಯ ಪರಿಚಯ ಅವರಿಗೆ ಚೆನ್ನಾಗಿತ್ತು. ಆದರೂ ಸಹ ಸರಳವಾದ ಪದಗಳನ್ನು ಹಾಡುವಾಗಲೂ ಕೂಡ ಉಚ್ಛಾರಣೆ ಬಗ್ಗೆ ನಮಗೆ ಫೋನ್ ಮಾಡಿ ಕೇಳುತ್ತಿದ್ದರು. ಪ್ರತಿ ಭಾಷೆಯ ಬಗ್ಗೆ ಅಪಾರ ಗೌರವ ಇದ್ದ ಕಾರಣದಿಂದಲೇ ಅವರು ಇಷ್ಟು ಕಾಳಜಿ ವಹಿಸುತ್ತಿದ್ದರು.
ಪ್ರತಿ ಹಾಡಿನಲ್ಲೂ ಅವರು ಹೊಸ ಗಾಯಕ
ಎಷ್ಟೇ ದೊಡ್ಡ ಗಾಯಕನಾದರೂ ಕೂಡ ಅವರು ಪ್ರತಿ ಬಾರಿ ಹಾಡುವಾಗಲೂ ಒಬ್ಬ ಹೊಸ ಗಾಯಕನ ರೀತಿಯಲ್ಲಿ ಉತ್ಸಾಹ ತೋರಿಸುತ್ತಿದ್ದರು. ಚಂದ್ರಮುಖಿ ಪ್ರಾಣಸಖಿ, ತನನಂ ತನನಂ ಸಿನಿಮಾಗಳ ಹಾಡು ಹೇಳುವಾಗ ನನಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಒಂದೊಂದು ಪದದ ಅರ್ಥವನ್ನೂ ತಿಳಿದುಕೊಂಡು ಅದಕ್ಕೆ ಜೀವ ತುಂಬುತ್ತಿದ್ದರು. ಅವರು ಸದಾ ಒಂದು ಮಾತು ಹೇಳುತ್ತಿದ್ದರು. ಟ್ಯೂನ್ಗೆ ಜೀವ ಬರುವುದು ಅದಕ್ಕೆ ಸಿಗುವ ಸಾಹಿತ್ಯ ಮತ್ತು ಭಾವನೆಯಿಂದ. ರಾಗ ಮನಸ್ಸಿಗೆ ಮುಟ್ಟುತ್ತದೆ. ಆದರೆ ಎಲ್ಲ ವಿವರಗಳನ್ನು ಅದು ಕೊಡುವುದಿಲ್ಲ. ಸಾಹಿತ್ಯದಿಂದ ಅದು ಸಾಧ್ಯವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಭಾಷೆ ಕೆಡಬಾರದು ಅಂತ ಅವರು ಎಚ್ಚರಿಕೆ ವಹಿಸುತ್ತಿದ್ದರು’ ಎಂದು ಎಸ್ಪಿಬಿ ಅವರ ವಿಶೇಷ ನೆನಪುಗಳನ್ನು ಕಲ್ಯಾಣ್ ಮೆಲುಕು ಹಾಕುತ್ತಾರೆ.
ಕೊನೆ ಹಾಡು ನನ್ನ ಜೊತೆ
‘ಎಸ್ಪಿಬಿ ಸರ್ ನಿಧನರಾಗುವುದಕ್ಕೂ ಮುನ್ನ ಹಾಡಿದ ಕೊನೇ ಕನ್ನಡ ಹಾಡು ನನ್ನದು. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಆ ಗೀತೆ ಮಾಡಿದ್ದೆವು. ಆ ಗೀತೆಗೆ ಎಸ್ಪಿಬಿ ಸಂಗೀತ, ನನ್ನ ಸಾಹಿತ್ಯವಿತ್ತು. ಹಣ ಮತ್ತು ಪಣ ಪದದ ನಡುವೆ ಗೊಂದಲ ಮಾಡಿಕೊಂಡು ಅದನ್ನು ಹಾಡುವಾಗ ಒಂದು ತಪ್ಪಾಗಿತ್ತು. ಅದನ್ನು ಮರುದಿನ ಅವರಿಗೆ ತಿಳಿಸಿದಾಗ ತಕ್ಷಣವೇ ರೆಕಾರ್ಡಿಂಗ್ ಸ್ಡುಡಿಯೋಗೆ ತೆರಳಿ ಹೊಸದಾಗಿ ಹಾಡಿದರು. ಹಾಗೆ, ಒಂದು ಅಕ್ಷರವನ್ನೂ ಕೂಡ ಅವರು ಭಕ್ತಿ ಭಾವದಿಂದ ನೋಡುತ್ತಿದ್ದರು’ ಎನ್ನುತ್ತಾರೆ ಕಲ್ಯಾಣ್.
‘ಎಲ್ಲಿಯೇ ಹೋದರು ಅವರು ನನ್ನನ್ನು ತಮ್ಮ ಮಾನಸಪುತ್ರ ಎಂದು ಹೇಳುತ್ತಿದ್ದರು. ಅದಕ್ಕಿಂತ ಬೇರೆ ಯಾವುದೇ ಪುರಸ್ಕಾರ ನನಗೆ ಬೇಕಿಲ್ಲ. ಪದ್ಮ ವಿಭೂಷಣ ಅವರ ಮಗ ನಾನು. ಅದು ಅವರ ಆಶೀರ್ವಾದ’ ಎಂದು ಕಲ್ಯಾಣ್ ಧನ್ಯತಾ ಭಾವ ತೋರುತ್ತಾರೆ.
ಇದನ್ನೂ ಓದಿ:
SPB Birth Anniversary: ಮೂಲತಃ ತೆಲುಗಿನವರಾದರೂ ಎಸ್ಪಿಬಿಗೆ ಕರ್ನಾಟಕದ ಮೇಲಿತ್ತು ಬೆಟ್ಟದಷ್ಟು ಪ್ರೀತಿ; ಕಾರಣ ಏನು?
ನಿಧನರಾಗುವುದಕ್ಕೂ ಮುನ್ನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ