
ಸೆಲೆಬ್ರಿಟಿಗಳ ಬರ್ತ್ಡೇ (Celebrity Birthday) ದಿನ ಸಿನಿಮಾ ತಂಡದಿಂದ ಗಿಫ್ಟ್ ಸಿಗೋದು ವಾಡಿಕೆ. ಸಿನಿಮಾ ಫಸ್ಟ್ಲುಕ್, ಟೀಸರ್ ಅಥವಾ ಟ್ರೇಲರ್ ಬಿಡುಗಡೆ ಆಗುತ್ತದೆ. ಇಂದು (ಮೇ 7) ವಿನಯ್ ರಾಜ್ಕುಮಾರ್ (Vinay Rajkumar) ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ‘ಪೆಪೆ’ ಚಿತ್ರದಲ್ಲಿನ (Pepe Movie) ವಿನಯ್ ರಾಜ್ಕುಮಾರ್ ಅವರ ಹೊಸ ಲುಕ್ ಅನಾವರಣಗೊಂಡಿದೆ. ಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ಕುಮಾರ್ ಅವರು ಈ ಬಾರಿ ರಕ್ತಸಿಕ್ತ ಲುಕ್ನಲ್ಲಿ ಮಿಂಚಿದ್ದಾರೆ. ‘ಪೆಪೆ’ ಸಿನಿಮಾದ ಟೀಸರ್ ಸಖತ್ ವೈರಲ್ ಆಗುತ್ತಿದೆ.
‘ಸೋಲ್ ಆಫ್ ಪೆಪೆ’ ಹೆಸರಿನಲ್ಲಿ ಎರಡು ನಿಮಿಷದ ವಿಡಿಯೋವನ್ನು ಪಿಆರ್ಕೆ ಆಡಿಯೋ ಮೂಲಕ ಹಂಚಿಕೊಳ್ಳಲಾಗಿದೆ. ವಿನಯ್ ಅವರು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಖ ರಕ್ತಸಿಕ್ತವಾಗಿದೆ. ಅವರನ್ನು ಪರಿಚಯಿಸುವುದಕ್ಕೂ ಮೊದಲು ಟೀಸರ್ನಲ್ಲಿ ಒಂದಷ್ಟು ವಿವರಣೆಗಳನ್ನು ನೀಡಲಾಗಿದೆ. ಈ ಟೀಸರ್ ನೋಡಿದ ವಿನಯ್ ರಾಜ್ಕುಮಾರ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್ಸ್ಟರ್ ಕಥೆಯನ್ನು ‘ಪೆಪೆ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನ ಆಕ್ಷನ್ ಸಿನಿಮಾ ಇದಾಗಿದೆ. ಶ್ರೀಲೇಶ್ ಎಸ್. ನಾಯರ್ ನಿರ್ದೇಶನದ ಈ ಸಿನಿಮಾವನ್ನು ಉದಯ್ ಶಂಕರ್ ಎಸ್. ನಿರ್ಮಾಣ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಸಿನಿಮಾಕ್ಕಿದೆ. ಈ ಹಿಂದೆ ಕೆಲ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿರುವ ವಿನಯ್ ರಾಜ್ಕುಮಾರ್ ಗ್ಯಾಂಗ್ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.
ವಿನಯ್ ರಾಜ್ಕುಮಾರ್ ಜನ್ಮದಿನಕ್ಕೆ ಅವರ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ. ಬರ್ತ್ಡೇ ದಿನ ರಾಘವೇಂದ್ರ ರಾಜ್ಕುಮಾರ್ ಅವರು ಪುತ್ರನಿಗೆ ವಿಶ್ ಮಾಡಿದ್ದಾರೆ. ಬಾಲ್ಯದ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ ಅವರು ಪೋಸ್ಟ್ ಮಾಡಿದ್ದಾರೆ.
ಇನ್ನು, ಬರ್ತ್ಡೇ ದಿನ ‘ಅಂದೊಂದಿತ್ತು ಕಾಲ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ವಿನಯ್ಗೆ ಜತೆಯಾಗಿ ಅದಿತಿ ಪ್ರಭುದೇವ ಅವರು ಕಾಣಿಸಿಕೊಂಡಿದ್ದಾರೆ. ಈ ಟೀಸರ್ ಲಕ್ಷಾಂತರಬಾರಿ ವೀಕ್ಷಣೆ ಕಂಡಿದೆ. ರಾಘವೇಂದ್ರ ರಾಜ್ಕುಮಾರ್ ಅವರು ಎರಡೂ ಟೀಸರ್ಗಳನ್ನು ಹಂಚಿಕೊಂಡು ಮಗನಿಗೆ ವಿಶ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.