ನಟ ವಿಷ್ಣುವರ್ಧನ್ ಅಭಿನಯದ ದಿ ಬೆಸ್ಟ್ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಬಂಧನ’ ಚಿತ್ರ ಕೂಡ ಸ್ಥಾನ ಪಡೆದುಕೊಳ್ಳುತ್ತದೆ. ಇಂದಿಗೂ ಆ ಸಿನಿಮಾವನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅದರಲ್ಲಿನ ಪ್ರೇಮಕಥೆ ಮನಮುಟ್ಟುವಂತಿದೆ. ಕೌಟುಂಬಿಕ ಪ್ರೇಕ್ಷಕರನ್ನು ಭರಪೂರ ಸೆಳೆದುಕೊಂಡ ಆ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಸುಹಾಸಿನಿ, ಜೈ ಜಗದೀಶ್ ಮೊದಲಾದವರು ನಟಿಸಿದ್ದರು. ಈಗ ಅದಕ್ಕೆ ಸೀಕ್ವೆಲ್ ತಯಾರಿಸಲು ಸಿದ್ಧತೆ ನಡೆದಿದೆ. ಅಂದು ‘ಬಂಧನ’ ನಿರ್ದೇಶಿಸಿದ್ದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರೇ ಈಗ ‘ಬಂಧನ 2’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಅನ್ನೋದು ವಿಶೇಷ.
ಚಂದನವನದಲ್ಲಿ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ ಅವರು ‘ಬಂಧನ 2’ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ವಿಷ್ಣುವರ್ಧನ್ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಅದರಲ್ಲಿ ವಿಷ್ಣುವರ್ಧನ್ ಫೋಟೋ ಹೈಲೈಟ್ ಆಗಿದೆ. ಹಾಗಾದರೆ ಈ ಪಾರ್ಟ್ 2ಗೆ ಹೀರೋ ಯಾರು ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡುವುದು ಸಹಜ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರ, ನಟ ಆದಿತ್ಯ ‘ಬಂಧನ 2’ ಚಿತ್ರಕ್ಕೆ ಹೀರೋ ಎಂದು ಸ್ವತಃ ನಿರ್ಮಾಪಕ ಅಣಜಿ ನಾಗರಾಜ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳಿಗೆ ಸೀಕ್ವೆಲ್ ಮಾಡುವ ಬಹುತೇಕರು ಪ್ರತ್ಯೇಕ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ‘ಬಂಧನ 2’ ಚಿತ್ರತಂಡ ಹಾಗಲ್ಲ. ‘ಬಂಧನ’ ಚಿತ್ರದ ಮುಂದುವರಿದ ಕಥೆಯೇ ‘ಬಂಧನ 2’ ಚಿತ್ರದಲ್ಲಿ ಇರಲಿದೆ ಎಂದು ಅಣಜಿ ನಾಗರಾಜ್ ಹೇಳಿದ್ದಾರೆ. ಅ.22ರಂದು ರಾಜೇಂದ್ರ ಸಿಂಗ್ ಬಾಬು ಅವರ ಜನ್ಮದಿನ. ಅಂದು ಈ ಸಿನಿಮಾ ಸೆಟ್ಟೇರಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ರಿವೀಲ್ ಆಗಲಿದೆ.
ಬಂಧನ ಚಿತ್ರ 1984ರಲ್ಲಿ ತೆರೆಕಂಡಿತ್ತು. ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ರಾಜೇಂದ್ರ ಸಿಂಗ್ ಬಾಬು ಅವರು ಮಾಡಿದ್ದರು. ಎಂ. ರಂಗರಾವ್ ಸಂಗೀತ ನಿರ್ದೇಶನ ಮಾಡಿದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ‘ನೂರೊಂದು ನೆನಪು ಎದೆಯಾಳದಿಂದ..’, ‘ಪ್ರೇಮದ ಕಾದಂಬರಿ..’, ‘ಈ ಬಂಧನ..’, ‘ಬಣ್ಣ ನನ್ನ ಒಲವಿನ ಬಣ್ಣ..’ ಹಾಡುಗಳು ಈಗಲೂ ಕೇಳುಗರ ಫೇವರಿಟ್ ಆಗಿ ಉಳಿದುಕೊಂಡಿವೆ. ಅಂತಹ ಮ್ಯೂಸಿಕಲ್ ಹಿಟ್ ಚಿತ್ರಕ್ಕೆ ಸೀಕ್ವೆಲ್ ಮಾಡುವುದು ನಿಜಕ್ಕೂ ಚಾಲೆಂಜಿಂಗ್ ಕೆಲಸ.
ಇದನ್ನೂ ಓದಿ:
‘ವಿಷ್ಣುವರ್ಧನ್ ರಾತ್ರೋರಾತ್ರಿ ಸಾಹಸ ಸಿಂಹ ಆಗಲಿಲ್ಲ; ಅವರ ಬಗ್ಗೆ ಪುಸ್ತಕ ಬರಲಿದೆ’: ನಟ ಅನಿರುದ್ಧ