
ನಟ ವಿಷ್ಣುವರ್ಧನ್ (Dr. Vishnuvardhan) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬುದು ಅಭಿಮಾನಿಗಳು ಹಾಗೂ ಕುಟುಂಬದವರ ಒತ್ತಾಯ ಆಗಿತ್ತು. ಆ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ. ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ಮರಣೋತ್ತವರಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಘೋಷಿಸಲಾಗಿದೆ. ಈ ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಎಲ್ಲರೂ ಸಂಭ್ರಮಿಸುತ್ತಿದ್ದಾರೆ.
ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಪ್ಪಾಜಿಗೆ ಕರ್ನಾಟಕ ರತ್ನ ಘೋಷಿಸಿದ್ದಕ್ಕೆ ಖುಷಿ ಆಯಿತು. ಅಪ್ಪಾಜಿಯವರು ಈ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು. ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಕನ್ನಡ ಚಿತ್ರರಂಗದ ಎಲ್ಲ ಕಲಾವಿದರಿಗೆ ನನ್ನ ಧನ್ಯವಾದಗಳು’ ಎಂದು ಅನಿರುದ್ಧ್ ಹೇಳಿದ್ದಾರೆ.
ಅಭಿಮಾನಿಗಳ ಪಾಲಿಗೆ ವಿಷ್ಣುವರ್ಧನ್ ಅವರು ಕೋಟಿಗೊಬ್ಬ. ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ‘ಕೋಟಿಗೊಬ್ಬ’ ಸಿನಿಮಾದ ಹಾಡಿನ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹಲವು ರೀತಿಯ ಮೀಮ್ಸ್ ವೈರಲ್ ಆಗುತ್ತಿವೆ.
“ಕರ್ನಾಟಕ ರತ್ನ ” ಡಾ. ವಿಷ್ಣುವರ್ಧನ್ ಸರ್ ❤️
Finally our karnataka government announced karnataka rathna for dada ❤️💥#VishnuVardhan #drvishnuvardhan #KarnatakaRathna pic.twitter.com/dZko4yDypk— ಕೆಂಚ 💥 (@DBOSS_KENCHA) September 11, 2025
200ಕ್ಕೂ ಅಧಿಕ ಸಿನಿಮಾಗಳಲ್ಲಿ ಡಾ. ವಿಷ್ಣುವರ್ಧನ್ ಅವರು ನಟಿಸಿದ್ದರು. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದರು. 1972ರಿಂದ 2009ರ ತನಕ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ನಾಗರಹಾವು, ಭೂತಯ್ಯನ ಮಗ ಅಯ್ಯು, ಬಂಧನ, ಮುತ್ತಿನ ಹಾರ, ಯಜಮಾನ, ಹಾಲುಂಡ ತವರು, ಜೀವನದಿ, ಕೋಟಿಗೊಬ್ಬ, ಸೂರ್ಯವಂಶ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ ಮುಂತಾದ ಸಿನಿಮಾಗಳನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಸರೋಜಾದೇವಿ-ವಿಷ್ಣುವರ್ಧನ್ಗೆ ಕರ್ನಾಟಕ ರತ್ನ: ಇಬ್ಬರು ಒಟ್ಟಿಗೆ ನಟಿಸಿದ ಸಿನಿಮಾಗಳಿವು
ಈ ವರ್ಷ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಕೇಳಿಬಂತು. ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಯಿತು. ಆ ಘಟನೆಯನ್ನು ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ವಿಷ್ಣುವರ್ಧನ್ ಪುಣ್ಯಭೂಮಿಯನ್ನು ಮತ್ತೆ ಪಡೆಯಲು ಅಭಿಮಾನಿಗಳು ಸರ್ಕಾರಕ್ಕೆ ಒತ್ತಾಯ ಹೇರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.