ಎರಡು ಲಾಕ್ಡೌನ್ ಪರಿಣಾಮದಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಈಗ ಮೂರನೇ ಬಾರಿಗೆ ಶಾಕ್ ಎದುರಾಗಿದೆ. ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ (Omicron Cases in India) ಹೆಚ್ಚುತ್ತಿರುವ ಕಾರಣ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ನೈಟ್ ಕರ್ಫ್ಯೂ ಜತೆಗೆ ವೀಕೆಂಡ್ ಕರ್ಫ್ಯೂ (Weekend Curfew) ಕೂಡ ಜಾರಿ ಆಗಿರುವುದರಿಂದ ಅನೇಕ ಸಿನಿಮಾಗಳು ರಿಲೀಸ್ ದಿನಾಂಕವನ್ನು ಮಂದೂಡಿಕೊಂಡಿವೆ. ಈ ವಾರ (ಜ.7) ರಿಲೀಸ್ ಆಗಬೇಕಿದ್ದ ಕನ್ನಡದ ‘ಡಿಎನ್ಎ’ (DNA Kannada Movie) ಚಿತ್ರಕ್ಕೂ ಇದೇ ಪರಿಸ್ಥಿತಿ ಬಂದೊದಗಿದೆ. ಮುಂದಿನ ವಾರವಾದರೂ ಸಮಸ್ಯೆ ಪರಿಹರಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber of Commerce) ‘ಡಿಎನ್ಎ’ ತಂಡ ಮನವಿ ಸಲ್ಲಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ‘ಡಿಎನ್ಎ’ ತಂಡ ಧೈರ್ಯ ತೋರಿಸಿತ್ತು. ಬಹುನಿರೀಕ್ಷಿತ ‘ಆರ್ಆರ್ಆರ್’ ಚಿತ್ರ ಕೂಡ ಜ.7ರಂದು ರಿಲೀಸ್ ಮಾಡಲು ಹಿಂದೇಟು ಹಾಕಿದೆ. ಆದರೆ ಅದೇ ದಿನಾಂಕದಲ್ಲಿ ಬಿಡುಗಡೆಯಾಗಲು ‘ಡಿಎನ್ಎ’ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅಷ್ಟರಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಆಯಿತು. ಆ ಒಂದು ನಿಯಮದಿಂದಾಗಿ ‘ಡಿಎನ್ಎ’ ತಂಡದ ನಿರ್ಧಾರವೇ ಬದಲಾಯಿತು.
ಜನರು ಸಿನಿಮಾಗೆ ಬರುವುದೇ ವೀಕೆಂಡ್ಗಳಲ್ಲಿ. ಶನಿವಾರ ಮತ್ತು ಭಾನುವಾರ ಕರ್ಫ್ಯೂ ಹೇರಿದರೆ ಎಲ್ಲ ಚಿತ್ರಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ. ಹಾಗಾಗಿ ಜ.7ರಂದು ‘ಡಿಎನ್ಎ’ ಸಿನಿಮಾವನ್ನು ರಿಲೀಸ್ ಮಾಡದೇ ಇರಲು ನಿರ್ಮಾಪಕ ಎಂ. ಮೈಲಾರಿ ನಿರ್ಧರಿಸಿದ್ದಾರೆ. ಕನಿಷ್ಠ ಮುಂದಿನ ವಾರದೊಳಗಾದರೂ ವೀಕೆಂಡ್ ಕರ್ಫ್ಯೂ ಸಡಿಲಿಸುವಂತೆ ಸರ್ಕಾರದ ಮನವೊಲಿಸಬೇಕು ಎಂದು ವಾಣಿಜ್ಯ ಮಂಡಳಿಗೆ ‘ಡಿಎನ್ಎ’ ತಂಡ ಮನವಿ ಸಲ್ಲಿಸಿದೆ. ವೀಕೆಂಡ್ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಮುಂದಿನ ವಾರವೇ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಆಲೋಚಿಸುತ್ತಿದ್ದಾರೆ ನಿರ್ಮಾಪಕರು.
ಈ ಚಿತ್ರಕ್ಕೆ ಪ್ರಕಾಶ್ರಾಜ್ ಮೇಹು ನಿರ್ದೇಶನ ಮಾಡಿದ್ದಾರೆ. ‘ಜನುಮದ ಜೋಡಿ’ ಸಿನಿಮಾದಿಂದಲೂ ಸಹ-ನಿರ್ದೇಶಕರಾಗಿ ಕೆಲಸ ಮಾಡಿಕೊಂಡು ಬಂದಿರುವ ಅವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ‘ಡಿಎನ್ಎ’ ಮೂಲಕ ಸದಭಿರುಚಿಯ ಕಥೆಯನ್ನು ಜನರಿಗೆ ತಲುಪಿಸಲು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ಆದರೆ ಸದ್ಯಕ್ಕೆ ಚಿತ್ರದ ಬಿಡುಗಡೆಗೆ ಒಮಿಕ್ರಾನ್ ಅಡ್ಡಿಯಾಗಿದೆ. ಈ ಸಿನಿಮಾದಲ್ಲಿ ಎಸ್ತರ್ ನರೋನಾ, ರೋಜರ್ ನಾರಾಯಣ್, ಅನಿತಾ ಭಟ್, ಮಾಸ್ಟರ್ ಆನಂದ್, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ:
‘ವಿಕ್ರಾಂತ್ ರೋಣ’ ಪ್ಲ್ಯಾನ್ನಲ್ಲಿ ದೊಡ್ಡ ಬದಲಾವಣೆ; ಒಟಿಟಿ ಆಫರ್ ಬೆನ್ನಲ್ಲೇ ಟೀಸರ್ ರಿಲೀಸ್ ಮುಂದೂಡಿಕೆ?
‘ರಾಧೆ ಶ್ಯಾಮ್’ ರಿಲೀಸ್ ದಿನಾಂಕ ಮುಂದಕ್ಕೆ; ಸಂಕ್ರಾಂತಿ ರೇಸ್ನಿಂದ ಹಿಂದೆ ಸರಿದ ಪ್ರಭಾಸ್ ಸಿನಿಮಾ