
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಆ ಬಳಿಕ ಹೈಕೋರ್ಟ್ನಲ್ಲಿ ಜಾಮೀನು ಪಡೆದು ಆರಾಮವಾಗಿ ಸಿನಿಮಾ ಶೂಟಿಂಗ್, ಪ್ರವಾಸ, ಕುಟುಂಬದೊಡನೆ ದೇವಸ್ಥಾನಗಳ ಸುತ್ತಾಟದಲ್ಲಿದ್ದ ದರ್ಶನ್ಗೆ ಸುಪ್ರೀಂಕೋರ್ಟ್ ದೊಡ್ಡ ಆಘಾತ ನೀಡಿದೆ. ನಟ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬರೋಬ್ಬರಿ ಏಳು ಆರೋಪಿಗಳ ಜಾಮೀನು ರದ್ದು ಮಾಡಿದೆ. ಇದೀಗ ದರ್ಶನ್, ಪವಿತ್ರಾ ಸೇರಿದಂತೆ ಏಳು ಪ್ರಮುಖ ಆರೋಪಿಗಳು ಮತ್ತೆ ಜೈಲು ಪಾಲಾಗಲಿದ್ದಾರೆ.
ಪವಿತ್ರಾ ಗೌಡ ಅವರು ಮಧ್ಯಾಹ್ನ 2 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಇನ್ನೂ ಕೆಲ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ನಲ್ಲಿ ಪೊಲೀಸರು ವಶಕ್ಕೆ ಪಡೆಯಲಾಗಿದೆ.
ದರ್ಶನ್ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಜೈಲಿಗೆ ಕಳಿಸಲಾಗುತ್ತದೆ. ಆದರೆ ಯಾವ ಜೈಲಿಗೆ ಎಂಬುದು ಪ್ರಶ್ನೆಯಾಗಿದೆ. ದರ್ಶನ್, ಮಧ್ಯಂತರ ಜಾಮೀನು ಪಡೆದಾಗ ಅವರು ಬಳ್ಳಾರಿ ಜೈಲಿನಲ್ಲಿದ್ದರು. ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ ಕಾರಣ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಆರೋಪಿಗಳು ಜಾಮೀನು ಪಡೆಯುವಾಗ ಯಾವ ಜೈಲಿನಲ್ಲಿದ್ದರೋ, ಜಾಮೀನು ರದ್ದಾದಾಗಲೂ ಅದೇ ಜೈಲಿಗೆ ಕಳಿಸಬೇಕು ಎಂಬ ನಿಯಮ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:Darshan Arrest: ನಟ ದರ್ಶನ್ ಬಂಧನ: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಮತ್ತೆ ಜೈಲು ವಾಸ
ಬಳ್ಳಾರಿ ಕಾರಾಗೃಹ ಅಧಿಕಾರಿ ಲತಾ ಅವರು ಹೇಳಿರುವಂತೆ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸುತ್ತಿರುವ ಬಗ್ಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲವಂತೆ. ದರ್ಶನ್ಗಾಗಿ ಯಾವುದೇ ವಿಶೇಷ ವ್ಯವಸ್ಥೆ ಮಾಡಲಾಗಿಲ್ಲ. ಈ ಹಿಂದೆ ದರ್ಶನ್ ಇದ್ದ ಕೊಠಡಿಯನ್ನೇ ಅವರಿಗೆ ಕೊಡಲಾಗುವುದು, ಆಗ ಅವರಿಗೆ ಕೊಡಲಾಗಿದ್ದ ಮೆಡಿಕಲ್ ಚೇರು ಸಹ ಅಲ್ಲಿಯೇ ಇದೆ, ಅದನ್ನು ಮತ್ತೆ ಅವರು ಬಳಸಿಕೊಳ್ಳಬಹುದು’ ಎಂದಿದ್ದಾರೆ.
ನಟ ದರ್ಶನ್ ಬಂಧನದಲ್ಲಿ ಮತ್ತು ದರ್ಶನ್ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಗ ಬೆಂಗಳೂರು ಪೊಲೀಸ್ ಕಮೀಷನರ್ ಸಹ ಆಗಿದ್ದ ಬಿ ದಯಾನಂದ ಅವರು ಈಗ ಕರ್ನಾಟಕ ರಾಜ್ಯದ ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ದರ್ಶನ್ ಈಗ ಮತ್ತೆ ದಯಾನಂದ ಅವರ ಸುಪರ್ಧಿಗೆ ಬಿದ್ಧಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Thu, 14 August 25