
‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ (Bigg Boss) ಕಾಕ್ರೋಚ್ ಸುಧಿ ಎಂಟ್ರಿ ಆಗಿದೆ. ಸುದೀಪ್ ಅವರು ನಟನನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ಸಖತ್ ಚಿಲ್ ಆಗಿ ಇರುವವರು. ದೊಡ್ಮನೆಯಲ್ಲಿ ಅವರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಅವರು ಬಿಗ್ ಬಾಸ್ಗೆ ಬಂದಿದ್ದು ಏಕೆ ಎಂಬುದನ್ನು ವಿವರಿಸಿದ್ದಾರೆ.
ಸುಧಿ ಅವರು ಬಿಗ್ ಬಾಸ್ಗೆ ಬರುತ್ತಾರೆ ಎಂಬ ಸುದ್ದಿ ಮೊದಲೇ ಹರಿದಾಡಿತ್ತು. ಈ ಬಗ್ಗೆ ಸಂದರ್ಶನಗಳಲ್ಲಿಯೂ ಅವರಿಗೆ ಪ್ರಶ್ನೆ ಮಾಡಲಾಯಿತು. ಆದರೆ, ಸಿನಿಮಾ ಕಮಿಟ್ಮೆಂಟ್ ಹೆಚ್ಚಿರುವುದರಿಂದ ನಾನಂತೂ ದೊಡ್ಮನೆಗೆ ಹೋಗಲ್ಲ ಎಂದು ಅವರು ನೇರವಾಗಿ ಹೇಳಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಈಗ ಅವರು ಬರಲ್ಲ, ಬರಲ್ಲ ಅಂತಲೇ ದೊಡ್ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ವೇದಿಕೆ ಏರಿದ ಬಳಿಕ ಮಾತನಾಡಿದ ಕಾಕ್ರೋಚ್ ಸುಧಿ ಅವರು ತಾವು ದೊಡ್ಮನೆಗೆ ಬಂದಿದ್ದರ ಹಿಂದಿನ ಕಾರಣ ತಿಳಿಸಿದರು. ‘ನಿಮ್ಮ ಜೊತೆ ಕೆಲಸ ಮಾಡೋದು ಹಾಗಿರಲಿ, ನೋಡೋಕು ಅವಕಾಶ ಸಿಕ್ಕಿರಲಿಲ್ಲ. ಅಲ್ಲಿ ಸಿಕ್ಕಿದ್ರೆ ಸಂದರ್ಶನ, ಇಲ್ಲಿ ಸಿಗೋದು ನಿಜವಾದ ದರ್ಶನ’ ಎಂದರು ಸುಧಿ.
‘ಪ್ರತಿಯೊಬ್ಬ ಆರ್ಟಿಸ್ಟ್ಗೂ ಕ್ಯಾಮೆರಾ ಎದುರು ಕ್ಲೋಸ್ಅಪ್ ಶಾಟ್ ಬೇಕು ಎಂದು ಅನಿಸುತ್ತಾ ಇರುತ್ತದೆ. ಆದರೆ, ಇಲ್ಲಿ ನೂರಾರು ಕ್ಯಾಮೆರಾಗಳು 24 ಗಂಟೆ ಜನರಿಗೆ ತೋರಿಸುತ್ತೇವೆ ಎಂದಾಗ ಹೇಗೆ ಬಿಡೋಕೆ ಆಗುತ್ತೆ ಹೇಳಿ’ ಎಂದು ಸುದೀಪ್ಗೆ ಸುಧಿ ಕೇಳಿದರು.
‘ನನಗೆ ಸಂಭಾವನೆ ಮುಖ್ಯ ಎಂದು ನಾನು ಈ ಮೊದಲು ಹೇಳಿದ್ದೆ. ಆದರೆ, ನಿಮ್ಮ ಎದುರು ನಿಜವನ್ನು ಹೇಳುತ್ತಿದ್ದೇನೆ. ನಾನು ಸಂಬಳಕ್ಕೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೇನೆ. ನನ್ನನ್ನು ನಾನು ಅರಿತುಕೊಳ್ಳಲು ಇಲ್ಲಿಗೆ ಬಂದಿಲ್ಲ. ನಾನು ಏನು ಎಂಬುದನ್ನು ತೋರಿಸಲು ಬಂದಿದ್ದೇನೆ’ ಎಂದು ಸುದೀಪ್ ಎದುರು ಹೇಳಿದರು ಕಾಕ್ರೋಚ್ ಸುಧಿ.
ಇದನ್ನೂ ಓದಿ: ಹದಿನೇಳೂ ಅಲ್ಲ, ಹದಿನೆಂಟೂ ಅಲ್ಲ; ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್ಗೆ ಎಂಟ್ರಿ
‘ಕಾಕ್ರೋಚ್’ ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಹೆಸರಿನ ಪಾತ್ರ ಮಾಡಿದ್ದರು ಸುಧಿ. ಅಲ್ಲಿಂದ ಕಾಕ್ರೋಚ್ ಸುಧಿ ಎಂದೇ ಫೇಮಸ್ ಆದರು. ಆ ಬಳಿಕ ಅವರಿಗೆ ಸಾಕಷ್ಟು ಆಫರ್ಗಳು ಬಂದವರು. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವಾಗ ಅವರ ಕೈಯಲ್ಲಿ ಸಾಕಷ್ಟು ಆಫರ್ಗಳಿವೆ. ಈ ಕೆಲಸಗಳನ್ನು ಮುಂದಕ್ಕೆ ಹಾಕಿ ಅವರು ದೊಡ್ಮನೆಗೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:41 pm, Sun, 28 September 25