2024ರ ಜೂನ್ ತಿಂಗಳಲ್ಲಿ ಅತಿ ಹೆಚ್ಚು ಚರ್ಚೆ ಆದ ಟಾಪಿಕ್ ಎಂದರೆ ಅದು ರೇಣುಕಾ ಸ್ವಾಮಿ (Renuka Swamy) ಕೊಲೆ ಕೇಸ್. ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂತು. ಅಂದಿನಿಂದ ಇಂದಿನ ತನಕ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಈ ಕೇಸ್ ಮುಂದುವರಿಯುತ್ತಿದೆ. ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಟ ದರ್ಶನ್, ನಟಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಎಲ್ಲ ಘಟನೆಗಳಿಗೆ ಸಂಬಂಧಪಟ್ಟಂತೆ ಈಗ (Murder of Renukaswamy) ವಿಕಿಪೀಡಿಯಾ ಪುಟ ಓಪನ್ ಆಗಿದೆ. ಇದರಲ್ಲಿ ಘಟನೆಯ ವಿವರಗಳನ್ನು ನೀಡಲಾಗಿದೆ.
ಪ್ರತಿ ದಿನ ನೂರಾರು ಕೊಲೆ ಪ್ರಕರಣಗಳು ವರದಿ ಆಗುತ್ತವೆ. ಆ ಎಲ್ಲ ಕೇಸ್ಗಳಿಗೆ ವಿಕಿಪೀಡಿಯಾ ಪುಟ ಇರುವುದಿಲ್ಲ. ಆದರೆ ರೇಣುಕಾ ಸ್ವಾಮಿ ಕೊಲೆಯಲ್ಲಿ ಹೈಪ್ರೊಫೈಲ್ ವ್ಯಕ್ತಿಗಳ ಹೆಸರು ಕೇಳಿಬಂದಿರುವ ಕಾರಣದಿಂದ ಇದು ಹೆಚ್ಚು ಸುದ್ದಿ ಆಗಿದೆ. ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರು ಈ ಕೇಸ್ನಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಅವರೆಲ್ಲರ ಬಗ್ಗೆ ‘Murder of Renukaswamy’ ವಿಕಿಪೀಡಿಯಾ ಪೇಜ್ನಲ್ಲಿ ಮಾಹಿತಿ ನೀಡಲಾಗಿದೆ.
ರೇಣುಕಾ ಸ್ವಾಮಿ ಕೊಲೆ ನಡೆದ ದಿನಾಂಕ, ಮೃತದೇಹ ಪತ್ತೆ ಆದ ಸ್ಥಳ, ಆತನ ಪತ್ನಿಯ ಹೆಸರು, ಮದುವೆ ಆದ ವರ್ಷ, ತಂದೆ-ತಾಯಿ ಹೆಸರು, ಕೊಲೆಗೆ ಕಾರಣ ಸೇರಿದಂತೆ ಅನೇಕ ವಿವರಗಳನ್ನು ಕಲೆಹಾಕಿ ಈ ವಿಕಿಪೀಡಿಯಾ ಪುಟ ತೆರೆಯಲಾಗಿದೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ ನಂತರ ಏನೆಲ್ಲ ಆಯಿತು? ಕೊಲೆಗೂ ಮೊದಲು ನಡೆದ ಘಟನೆಗಳು ಏನು? ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಯಲ್ಲಿ ಇರುವ ವಿವರಗಳೇನು ಎಂಬುದನ್ನು ಈ ಪುಟದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಸಹೋದರ, ತಾಯಿಯಿಂದ ದರ್ಶನ್ ತೂಗುದೀಪ ದೂರ ಇರೋದು ಯಾಕೆ? ಸತ್ಯ ತೆರೆದಿಟ್ಟ ನಿರ್ದೇಶಕ
ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧದದ ಬಗ್ಗೆಯೂ ಈ ವಿಕಿಪೀಡಿಯಾ ಪುಟದಲ್ಲಿ ಉಲ್ಲೇಖಿಸಿದ್ದಾರೆ. ‘ದರ್ಶನ್ ಅವರ ಬಹುಕಾಲದ ಪಾರ್ಟ್ನರ್ ಪವಿತ್ರಾ ಗೌಡ’ ಎಂದು ಬರೆಯಲಾಗಿದೆ. ಈ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ದರ್ಶನ್ ಅವರು ಎ2 ಆಗಿದ್ದಾರೆ. ಕೊಲೆ ಆರೋಪದಲ್ಲಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮೀ ಹೋರಾಟ ನಡೆಸುತ್ತಿದ್ದಾರೆ. ಅಭಿಮಾನಿಗಳಿಗೆ ಈ ಪ್ರಕರಣದಿಂದ ತೀವ್ರ ಬೇಸರ ಆಗಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.