‘ಒಂದು ಮೊಟ್ಟೆಯ ಕಥೆ’ ಟೀಮ್ ಜೊತೆ ರಾಜ್ ಬಿ. ಶೆಟ್ಟಿ ಹೊಸ ‘ರೂಪಾಂತರ’
ರಾಜ್ ಬಿ. ಶೆಟ್ಟಿ ಅವರ ಹೊಸ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ‘ರೂಪಾಂತರ’ ಶೀರ್ಷಿಕೆಯ ಈ ಸಿನಿಮಾಗೆ ಮಿಥಿಲೇಶ್ ಎಡವಲತ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದ ತೆರೆಹಿಂದೆ ಕೆಲಸ ಮಾಡಿದ್ದ ಬಹುತೇಕರು ಈಗ ‘ರೂಪಾಂತರ’ ಸಿನಿಮಾಗಾಗಿ ಮತ್ತೊಮ್ಮೆ ಒಂದಾಗಿದ್ದಾರೆ. ಆ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದಾರೆ.
ನಟ ರಾಜ್ ಬಿ. ಶೆಟ್ಟಿ (Raj B Shetty) ಅವರು ಪ್ರೇಕ್ಷಕರಿಗೆ ಪರಿಚಯ ಆಗಿದ್ದು ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ. ಈಗ ಅದೇ ತಂಡದ ಜೊತೆ ಸೇರಿ ಅವರು ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಮಲಯಾಳಂನ ‘ಟರ್ಬೋ’ ಸಿನಿಮಾದಲ್ಲಿ ಖಳನಾಯಕನಾಗಿ ರಾಜ್ ಬಿ. ಶೆಟ್ಟಿ ಅವರು ಮಿಂಚಿದ್ದರು. ಹೀಗೆ, ಬೇರೆ ಬೇರೆ ಪಾತ್ರಗಳ ಮೂಲಕ ಅವರು ಸದಾ ಸರ್ಪ್ರೈಸ್ ನೀಡುತ್ತಾರೆ. ಈಗ ಅವರ ಹೊಸ ಸಿನಿಮಾ ‘ರೂಪಾಂತರ’ (Roopanthara) ಘೋಷಣೆ ಆಗಿದೆ. ಇದರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಅನಾವರಣ ಮಾಡಲಾಗಿದೆ.
‘ರೂಪಾಂತರ’ ಸಿನಿಮಾದ ಬಗ್ಗೆ ರಾಜ್ ಬಿ. ಶೆಟ್ಟಿ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ. ‘ಕೆಲ ಸಿನಿಮಾಗಳು ಮನಸ್ಸಿಗೆ ಬಲು ಹತ್ತಿರ. ಅಂತಹ ಒಂದು ಸುಂದರ ಚಿತ್ರ ರೂಪಾಂತರ. ಈ ಸಿನಿಮಾದ ಭಾಗ ಆಗಿರುವುದರ ಜೊತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿಜೀವನದ ಭಾಗ್ಯ. ರೂಪಾಂತರದ ಪೋಸ್ಟರ್ ಈಗ ನಿಮ್ಮ ಮುಂದೆ. ಸದ್ಯದಲ್ಲೇ ಚಿತ್ರವೂ ನಿಮ್ಮ ಮುಂದೆ ಬರಲಿದೆ. ಎಂದಿನಂತೆ ಜೊತೆಗಿರಿ’ ಎಂದು ಅವರು ಬರೆದುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಹೊಸತನ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮಿಥಿಲೇಶ್ ಎಡವಲತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ರಾಜ್ ಬಿ. ಶೆಟ್ಟಿ ಜೊತೆ ಸೋಮಶೇಖರ್ ಬೋಲೇಗಾಂವ್, ಹನುಮಕ್ಕ, ಲೇಖಾ ನಾಯ್ಡು, ಅಂಜನ್ ಭಾರಧ್ವಾಜ್, ಭರತ್ ಜಿ.ಬಿ. ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಭುವನೇಶ್ ಮಣಿವಣ್ಣನ್ ಅವರು ಸಂಕಲನ ಮಾಡಿದ್ದಾರೆ. ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರ ನಿರ್ಮಾಣ ವಿನ್ಯಾಸ ಈ ಚಿತ್ರಕ್ಕಿದೆ.
ಇತ್ತೀಚೆಗೆ ‘ಟರ್ಬೋ’ ಸಿನಿಮಾವನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಬಿಡುಗಡೆ ಮಾಡಿದ್ದ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಯು ‘ರೂಪಾಂತರ’ ಚಿತ್ರವನ್ನೂ ಹಂಚಿಕೆ ಮಾಡಲಿದೆ ಎಂದು ಈ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಾಲಕೃಷ್ಣ ಅರ್ವನಕರ್ ತಿಳಿಸಿದ್ದಾರೆ. ರಾಜ್ ಬಿ. ಶೆಟ್ಟಿ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಂಭಾಷಣೆಯನ್ನು ಕೂಡ ಬರೆದಿದ್ದಾರೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನ ನ್ಯೂಯಾರ್ಕ್ನಲ್ಲಿ ಪ್ರದರ್ಶನ ಆಗಲಿದೆ ಕನ್ನಡದ ‘ಕೆಂಡ’ ಸಿನಿಮಾ
‘ಒಂದು ಮೊಟ್ಟೆಯ ಕಥೆ’ ಸಿನಿಮಾದ ನಿರ್ಮಾಪಕರಾದ ಸುಹಾನ್ ಪ್ರಸಾದ್ ಅವರು ‘ರೂಪಾಂತರ’ ಚಿತ್ರವನ್ನೂ ನಿರ್ಮಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಅವರು ಛಾಯಗ್ರಹಣ ಮಾಡಿದ್ದಾರೆ. ಮಿಧುನ್ ಮುಕುಂದನ್ ಅವರು ಸಂಗೀತ ನೀಡಿದ್ದಾರೆ. ಆ ಮೂಲಕ ‘ಒಂದು ಮೊಟ್ಟೆಯ ಕಥೆ’ ಬಳಿಕ ಮತ್ತೊಮ್ಮೆ ಇವರೆಲ್ಲರೂ ಒಂದಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.