ಈ ವಾರ ತೆರೆಗೆ ಬರ್ತಿವೆ ವಿಶೇಷ ಸಿನಿಮಾಗಳು; ಇಲ್ಲಿದೆ ವಿವರ

|

Updated on: Oct 24, 2024 | 5:32 PM

ಈ ವಾರ ಹಲವಾರು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ‘ಯಲಾಕುನ್ನಿ’ ಸಿನಿಮಾದಲ್ಲಿ ಕೋಮಲ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ, ಇದು ವಜ್ರಮುನಿ ಅವರ ಡೈಲಾಗ್‌ನಿಂದ ಪ್ರೇರಿತವಾಗಿದೆ. ಅಭಿಮನ್ಯು ಕಾಶಿನಾಥ್ ಅಭಿನಯಿಸಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಕೂಡ ಈ ವಾರ ಬಿಡುಗಡೆಯಾಗುತ್ತಿದೆ.

ಈ ವಾರ ತೆರೆಗೆ ಬರ್ತಿವೆ ವಿಶೇಷ ಸಿನಿಮಾಗಳು; ಇಲ್ಲಿದೆ ವಿವರ
ಈ ವಾರ ರಿಲೀಸ್ ಆಗಲಿರುವ ಸಿನಿಮಾಗಳು
Follow us on

ನವರಾತ್ರಿ ಸಂದರ್ಭದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಿವೆ. ಇನ್ನು ದೊಡ್ಡ ಸಿನಿಮಾಗಳ ಅಬ್ಬರ ಏನಿದ್ದರೂ ಶುರುವಾಗೋದು ದೀಪಾವಳಿಗೆ. ಇವುಗಳ ಮಧ್ಯದಲ್ಲಿ ಹೊಸ ತಂಡಗಳು, ಹೊಸ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಈ ವಾರ ಭಿನ್ನ ಭಿನ್ನ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರ ರಿಲೀಸ್ ಆಗುತ್ತಿರುವ ಕನ್ನಡದ ಎರಡು ಪ್ರಮುಖ ಸಿನಿಮಾಗಳಿಗೆ ಹಳೆಯ ಕಾಲದ ಹೀರೋಗಳಿಗೆ ಕನೆಕ್ಷನ್​ ಇದೆ. ಈ ವಾರದ ಸಿನಿಮಾಗಳು ಯಾವವು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಲಾಕುನ್ನಿ

‘ಯಲಾಕುನ್ನಿ’ ಇದು ವಜ್ರಮುನಿ ಅವರ ವಿಶೇಷ ಡೈಲಾಗ್. ಇದು ಸಖತ್ ಫೇಮಸ್ ಆಗಿತ್ತು. ಇದನ್ನೇ ಇಟ್ಟುಕೊಂಡು ‘ಯಲಾಕುನ್ನಿ’ ಎಂಬ ಟೈಟಲ್​ನೊಂದಿಗೆ ಸಿನಿಮಾ ಮಾಡಲಾಗಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ಕೋಮಲ್ ಕುಮಾರ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಅವರು ವಜ್ರಮುನಿ ಗೆಟಪ್​ನಲ್ಲಿ ಬಂದಿದ್ದಾರೆ. ಉಳಿದಂತೆ ನಿಸರ್ಗ ಅಪ್ಪಣ್ಣ, ದತ್ತಣ್ಣ, ಸಾಧುಕೋಕಿಲ, ಶಿವರಾಜ್ ಕೆಆರ್​ಪೇಟೆ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಎನ್​ಆರ್​ ಪ್ರದೀಪ್ ಈ ಚಿತ್ರವನ್ನು ನಿರ್ದೇಶನ ಮಾಡಿದರೆ ಅನಸೂಯಾ ಕೋಮಲ್, ಸಹನ ಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಅಕ್ಟೋಬರ್ 25ಕ್ಕೆ ತೆರೆಗೆ ಬರುತ್ತಿದೆ.

‘ಎಲ್ಲಿಗೆ ಪಯಣ ಯಾವುದೋ ದಾರಿ’

ಕಾಶಿನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಮಗ ಅಭಿಮನ್ಯು ಕಾಶಿನಾಥ್ ಅವರು ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ನಟನೆಯ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಈ ವಾರ ತೆರೆಗೆ ಬರುತ್ತಿದೆ. ಕಿರಣ್ ಸೂರ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲಿಗೆ ಪಯಣ ಯಾವುದೋ ದಾರಿ: ಸುದೀಪ್​ಗೆ ಇಷ್ಟವಾಯ್ತು ಕಾಶಿನಾಥ್ ಮಗನ ಸಿನಿಮಾ ಟ್ರೇಲರ್

ಈ ಸಿನಿಮಾಗಳ ಜೊತೆಗೆ ಶೆಫಾಲಿ ಸಿಂಗ್ ಸೋನಿ, ಕೀರ್ತಿ ಕುಮಾರ್ ನಾಯ್ಕ್, ಹನುಮಂತೇ ಗೌಡ ನಟನೆಯ ‘ನಸಾಬ್’ ಚಿತ್ರ, ಹರ್ಷಾ ವೆಂಕಟೇಶ್, ಅಪೂರ್ವಾ ಶ್ರೀ, ಕಾರ್ತಿಕ್ ಮಹೇಶ್ ನಟನೆಯ ‘ಮೂಕ ಜೀವ’, ಜಯಸೂರ್ಯ, ಗೌರಿ ಸಾಗರ್ ಮೊದಲಾದವರು ನಟಿಸಿರೋ ‘ಪ್ರಾಪ್ತಿ’ ಚಿತ್ರವೂ ಅಕ್ಟೋಬರ್ 25ರಂದು ತೆರೆಗೆ ಬರುತ್ತಿದೆ. ಇವುಗಳ ಜೊತೆಗೆ ಪರಭಾಷೆಯಲ್ಲೂ ಒಂದಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳ ಜೊತೆಗೆ ಈ ಸಿನಿಮಾಗಳು ಸ್ಪರ್ಧೆ ನಡೆಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:32 pm, Thu, 24 October 24