ಎಲ್ಲಿಗೆ ಪಯಣ ಯಾವುದೋ ದಾರಿ: ಸುದೀಪ್ಗೆ ಇಷ್ಟವಾಯ್ತು ಕಾಶಿನಾಥ್ ಮಗನ ಸಿನಿಮಾ ಟ್ರೇಲರ್
ಬಿಗ್ ಬಾಸ್ ನಿರೂಪಣೆ ಮತ್ತು ಸಿನಿಮಾ ಕೆಲಸಗಳ ಬ್ಯುಸಿ ನಡುವೆಯೂ ಕಿಚ್ಚ ಸುದೀಪ್ ಅವರು ಬಿಡುವು ಮಾಡಿಕೊಂಡು ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಇದು ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ನಟನೆಯ ಸಿನಿಮಾ. ಕಿರಣ್ ಎಸ್. ಸೂರ್ಯ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಅ.25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ನಟ ಕಿಚ್ಚ ಸುದೀಪ್ ಅವರು ಯಾವಾಗಲೂ ಹೊಸಬರ ಬೆನ್ನು ತಟ್ಟುತ್ತಾರೆ. ಈಗ ಅವರು ಕಾಶಿನಾಥ್ ಪುತ್ರನ ಹೊಸ ಸಿನಿಮಾಗೆ ಸಾಥ್ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಶಿನಾಥ್ ಅವರು ಈಗ ನಮ್ಮೊಂದಿಗೆ ಇಲ್ಲ. ಅವರ ಪುತ್ರ ಅಭಿಮನ್ಯು ಕಾಶಿನಾಥ್ ಹೀರೋ ಆಗಿ ನಟಿಸಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಬಂದು ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಸಿನಿಮಾ ತಂಡದ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಅವರು ಸಖತ್ ಬ್ಯುಸಿ. ಒಂದೆಡೆ ಸಿನಿಮಾ ಕೆಲಸಗಳು, ಇನ್ನೊಂದೆಡೆ ಬಿಗ್ ಬಾಸ್ ನಿರೂಪಣೆ. ಈ ಎಲ್ಲ ಒತ್ತಡಗಳ ನಡುವೆ ಬಿಡುವು ಮಾಡಿಕೊಂಡು ಅವರು ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟ್ರೇಲರ್ ಅನಾವರಣ ಮಾಡಿಕೊಟ್ಟಿದ್ದಾರೆ. ಟ್ರೇಲರ್ ನೋಡಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗಕ್ಕೆ ಕಾಶಿನಾಥ್ ನೀಡಿದ್ದ ಕೊಡುಗೆಗಳನ್ನು ಸುದೀಪ್ ಸ್ಮರಿಸಿದರು.
‘ಕಾಶಿನಾಥ್ ಅವರ ಕೊಡುಗೆಗಳನ್ನು ಹಾಗೂ ಅವರಿಂದ ಆದ ಒಳಿತುಗಳನ್ನು ಸ್ಯಾಂಡಲ್ವುಡ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ನಾವು ಅಭಿಮನ್ಯುಗೆ ನೀಡುತ್ತಿರುವ ಬೆಂಬಲ ತುಂಬಾ ಚಿಕ್ಕದು’ ಎಂದರು ಸುದೀಪ್. ಈ ಸಿನಿಮಾದ ಟ್ರೇಲರ್ನಲ್ಲಿ ಅಭಿಮನ್ಯು ಕಾಣಿಸಿಕೊಂಡ ರೀತಿಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.
‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಟ್ರೇಲರ್:
ಈ ಸಿನಿಮಾಗೆ ಕಿರಣ್ ಎಸ್. ಸೂರ್ಯ ಅವರು ನಿರ್ದೇಶನ ಮಾಡಿದ್ದಾರೆ. ಅವರ ತಂಡದ ಕೆಲಸವನ್ನು ಸುದೀಪ್ ಹೊಗಳಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಕೂಡ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಅವರು ಈ ಟೀಮ್ಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ‘ಸುದರ್ಶನ್ ಆರ್ಟ್ಸ್’ ಮೂಲಕ ಜತಿನ್ ಪಟೇಲ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ
‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾದಲ್ಲಿ ಅಭಿಮನ್ಯು ಕಾಶಿನಾಥ್ ಜೊತೆ ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲಬುರ್ಗಿ, ಬಲರಾಜ್ ವಾಡಿ, ಅಯಾಂಕ್, ಶೋಭನ್, ರಿನಿ ಬೋಪಣ್ಣ, ರವಿತೇಜ, ಪ್ರದೀಪ್, ಕಿಶೋರ್, ಪ್ರಿಯಾ, ಅಶ್ವಿನಿ ರಾವ್ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಕಿರಣ್ ಎಸ್. ಸೂರ್ಯ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಪ್ರಣವ್ ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯ ರಾಮ್ ಛಾಯಾಗ್ರಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.