
‘ರಾಕಿಂಗ್ ಸ್ಟಾರ್’ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arunkumar) ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದರು. ಅವರ ‘ಪಿಎ ಪ್ರೊಡಕ್ಷನ್ಸ್’ ಸಂಸ್ಥೆಯಿಂದ ‘ಕೊತ್ತಲವಾಡಿ’ (Kothalavadi) ಸಿನಿಮಾ ಸಿದ್ಧವಾಗುತ್ತಿದೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮ ಮೇ 21ರಂದು ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಯಶ್ ತಂದೆ ಅರುಣ್ ಕುಮಾರ್, ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್, ಪೃಥ್ವಿ ಅಂಬಾರ್ (Pruthvi Ambaar), ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ನಿರ್ದೇಶಕ ಶ್ರೀರಾಜ್ ಮುಂತಾದವರು ಪಾಲ್ಗೊಂಡಿದ್ದರು. ಶರಣ್ ಅವರು ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
ಶರಣ್ ಅವರು ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಗಿದ್ದರು. ‘ಒಂದು ಹೊಸ ಶುರುವಿನ ವೈಬ್ ಇಲ್ಲಿ ಕಾಣುತ್ತಿದೆ. ನಮ್ಮ ಯಶಸ್ಸಿನ ಗುಟ್ಟು ಈ ಒಗ್ಗಟ್ಟಿನ ಸಾಕ್ಷಿ. ಈ ಸಿನಿಮಾಗೆ ಕೆಲಸ ಮಾಡಿರುವವರ ಮುಖದಲ್ಲಿ ಪಾಸಿಟಿವ್ ಎನರ್ಜಿ, ಕುತೂಹಲ, ಭಕ್ತಿ, ಆತ್ಮೀಯತೆ, ಪ್ರೀತಿ ಕಾಣುತ್ತಿದೆ. ಒಂದು ಯಶಸ್ವಿಗೆ ಇಷ್ಟು ಸಾಕು’ ಎಂದು ಶರಣ್ ಹೇಳಿದರು.
ಪುಷ್ಪ ಅರುಣ್ ಕುಮಾರ್ ಅವರು ಈ ವೇಳೆ ಮಾತನಾಡಿದರು. ‘ಕೆಲಸ ಮಾತನಾಡಬೇಕು, ನಾವು ಮಾತನಾಡಬಾರದು. ಯಶ್ ಮನೆಯವರ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ದಿದ್ದರೆ ಮಾಡಬೇಡಿ. ಸಿನಿಮಾ ಏನು ಕೇಳುತ್ತದೆಯೋ ಅದನ್ನು ಕೊಡಬೇಕು. ಸಿನಿಮಾಗೆ ಮೋಸ ಮಾಡಬಾರದು ಅಂತ ಚಿತ್ರತಂಡಕ್ಕೆ ನಾನು ಹೇಳಿದ್ದೆ. ಪ್ರೇಕ್ಷಕರ ಪ್ರತಿಕ್ರಿಯೆ ನಾವು ಕಾಯುತ್ತೇವೆ’ ಎಂದಿದ್ದಾರೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್.
‘ಕೊತ್ತಲವಾಡಿ’ ಸಿನಿಮಾದಲ್ಲಿ ಹಳ್ಳಿಯ ಕಹಾನಿ ಇದೆ. ಆ ಬಗ್ಗೆ ನಟ ಪೃಥ್ವಿ ಅಂಬಾರ್ ಹೇಳಿದ್ದಾರೆ. ‘ಹಳ್ಳಿಯ ಮುಗ್ಧ, ಪವರ್ ಫುಲ್ ಪಾತ್ರ ಮಾಡಬೇಕು ಎಂಬ ಆಸೆ ಇತ್ತು. ಈ ಚಿತ್ರದಲ್ಲಿ ಅದು ಸಾಧ್ಯವಾಗಿದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಮುಗಿದರೂ ನಿರ್ಮಾಪಕರು ಯಾರು ಎಂಬುದು ಗೊತ್ತಿರಲಿಲ್ಲ. ನಂತರ ಪುಷ್ಪ ಮೇಡಂ ಅವರ ಹಾಸನದ ಮನೆಗೆ ಹೋದೆವು. ಮೀಟಿಂಗ್ ಮುಗಿಸಿ ಹೊರಟ ಬಳಿಕ ‘ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ’ ಅಂತ ಆಶೀರ್ವಾದ ಮಾಡಿದರು. ಬ್ರ್ಯಾಗ್ರೌಂಡ್ ಇಲ್ಲದವರ ಜೊತೆಗೆ ಅವರು ನಿಲ್ಲುತ್ತಾರೆ ಎಂಬ ನಂಬಿಕೆ ಇದೆ’ ಎಂದರು ಪೃಥ್ವಿ ಅಂಬಾರ್.
ಇದನ್ನೂ ಓದಿ: ರಾಮಾಯಣ ಸಿನಿಮಾದಲ್ಲಿ ಯಶ್ಗೆ ಕಾಜಲ್ ಅಗರ್ವಾಲ್ ಜೋಡಿ; ಮಂಡೋದರಿ ಪಾತ್ರದಲ್ಲಿ ‘ಮಗಧೀರ’ ಚೆಲುವೆ
8 ತಿಂಗಳು ಸಮಯ ತೆಗೆದುಕೊಂಡು ನಿರ್ದೇಶಕ ಶ್ರೀರಾಜ್ ಅವರು ‘ಕೊತ್ತಲವಾಡಿ’ ಸಿನಿಮಾಗೆ ಕಥೆ ಸಿದ್ಧಪಡಿಸಿದ್ದರು. ಕಥೆ ಇಷ್ಡವಾಗಿ ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರು ಮಾಸ್ ಆಗಿರುವ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.