Moggina Manasu: ಯಶ್​, ರಾಧಿಕಾ ಪಂಡಿತ್​ಗೆ ಲೈಫ್​ ನೀಡಿದ ‘ಮೊಗ್ಗಿನ ಮನಸು’ ಸಿನಿಮಾಗೆ ಈಗ 15 ವರ್ಷ

|

Updated on: Jul 18, 2023 | 7:15 AM

Rocking Star Yash: ‘ಮೊಗ್ಗಿನ ಮನಸು’ ಸಿನಿಮಾದ ಯಶಸ್ಸಿನಿಂದ ಶಶಾಂಕ್​ ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಯಶ್​, ರಾಧಿಕಾ ಪಂಡಿತ್​, ಶುಭಾ ಪೂಂಜಾ ಅವರು ಸ್ಟಾರ್​ ಪಟ್ಟ ಪಡೆದುಕೊಂಡರು.

Moggina Manasu: ಯಶ್​, ರಾಧಿಕಾ ಪಂಡಿತ್​ಗೆ ಲೈಫ್​ ನೀಡಿದ ‘ಮೊಗ್ಗಿನ ಮನಸು’ ಸಿನಿಮಾಗೆ ಈಗ 15 ವರ್ಷ
ಮೊಗ್ಗಿನ ಮನಸು ಪೋಸ್ಟರ್​, ನಿರ್ದೇಶಕ ಶಶಾಂಕ್​
Follow us on

ನಟ ಯಶ್​ (Yash) ಅವರು ಇಂದು ‘ರಾಕಿಂಗ್​ ಸ್ಟಾರ್​’ ಆಗಿ ಮಿಂಚುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್​ ಕೂಡ ಚಿತ್ರದಲ್ಲಿ ಸಾಧನೆ ಮಾಡಿದ್ದಾರೆ. ಅದಕ್ಕೆಲ್ಲ ನಾಂದಿ ಹಾಡಿದ್ದು ‘ಮೊಗ್ಗಿನ ಮನಸು’ ಸಿನಿಮಾ. ಹದಿಹರೆಯದ ಹೃದಯಗಳನ್ನು ತನ್ನತ್ತ ಸೆಳೆದುಕೊಂಡಿದ್ದ ಆ ಸಿನಿಮಾ ಬಿಡುಗಡೆ ಆಗಿದ್ದು 2008ರ ಜುಲೈ 18ರಂದು. ನಿರ್ದೇಶಕ ಶಶಾಂಕ್​ (Director Shashank) ಅವರು ತೆರೆಗೆ ತಂದ ಸುಂದರ ಪ್ರೇಮಕಥೆಗೆ ಈಗ 15 ವರ್ಷ ತುಂಬಿದೆ. ‘ಮೊಗ್ಗಿನ ಮನಸು’ ಸಿನಿಮಾ ತೆರೆಕಂಡು ಒಂದೂವರೆ ದಶಕ ಕಳೆದಿದೆ. ಇಂದಿಗೂ ಕೂಡ ಪ್ರೇಕ್ಷಕರ ಫೇವರಿಟ್​ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಸ್ಥಾನವಿದೆ. ಈ ದಿನವನ್ನು ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ. ಸಿನಿಪ್ರಿಯರು ‘ಮೊಗ್ಗಿನ ಮನಸು’ (Moggina Manasu) ಬಗೆಗಿನ ನೆನಪುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಮೆಲುಕು ಹಾಕುತ್ತಿದ್ದಾರೆ.

ಸೂಕ್ಷ್ಮವಾದ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕ ಶಶಾಂಕ್ ಅವರು ಫೇಮಸ್​. ಅವರ ನಿರ್ದೇಶನದಲ್ಲಿ ‘ಮೊಗ್ಗಿನ ಮನಸು’ ಮೂಡಿಬಂದ ಪರಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಹಾಡುಗಳಂತೂ ಸೂಪರ್​ ಹಿಟ್​ ಆಗಿದ್ದವು. ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದ ಎಲ್ಲ ಗೀತೆಗಳು ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. ಈ ಸಿನಿಮಾದಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಮಾತ್ರವಲ್ಲದೇ ನಟಿ ಶುಭಾ ಪೂಂಜಾ ಕೂಡ ಸಖತ್​ ಜನಪ್ರಿಯತೆ ಪಡೆದುಕೊಂಡರು.

ಇದನ್ನೂ ಓದಿ: Yash: ಯಶ್​ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್​’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್​ ಖಾನ್​

ಅಂದು ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಲವರ್ ಬಾಯ್​ ಆಗಿ ಕಾಣಿಸಿಕೊಂಡಿದ್ದ ಯಶ್​ ಈಗ ಮಾಸ್​ ಹೀರೋ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ತೆರೆಕಂಡ ಬಳಿಕ ಅವರ ಹವಾ ಹೆಚ್ಚಿತು. ಭಾರತದಲ್ಲಿ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಅಷ್ಟರಮಟ್ಟಿಗೆ ಯಶ್​ ಜನಪ್ರಿಯತೆ ಗಳಿಸಿದ್ದಾರೆ. ಅವರ ಮುಂದಿನ ಸಿನಿಮಾದ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ #Yash19 ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

ಇದನ್ನೂ ಓದಿ: ಹೊಸ ಆರಂಭಗಳಿಗೆ ನಾಂದಿ ಹಾಡಿದ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್

‘ಮೊಗ್ಗಿನ ಮನಸು’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಯಶ್​ ಮತ್ತು ರಾಧಿಕಾ ಪಂಡಿತ್​ ಅವರು ರಿಯಲ್​ ಲೈಫ್​ನಲ್ಲಿಯೂ ಒಂದಾದರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಮದುವೆ ಬಳಿಕ ರಾಧಿಕಾ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ. ಕುಟುಂಬ ಮತ್ತು ಮಕ್ಕಳ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಒಳ್ಳೆಯ ಪಾತ್ರ ಮತ್ತು ಸಿನಿಮಾದ ಮೂಲಕ ಅವರು ಕಮ್​ಬ್ಯಾಕ್​ ಮಾಡಲಿ ಎಂಬುದು ಅಭಿಮಾನಿಗಳ ಆಸೆ.

ಇದನ್ನೂ ಓದಿ: ಈ ವ್ಯಕ್ತಿ ಕೆಟ್ಟ ಸಿನಿಮಾ ಮಾಡಲು ಸಾಧ್ಯವೇ ಇಲ್ಲ: ನಿರ್ದೇಶಕನ ಹೊಗಳಿದ ಸುದೀಪ್

‘ಮೊಗ್ಗಿನ ಮನಸು’ ಚಿತ್ರದಿಂದ ಸಿಕ್ಕ ಯಶಸ್ಸಿನಿಂದ ನಿರ್ದೇಶಕ ಶಶಾಂಕ್​ ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಆ ಬಳಿಕ ಅವರು ಸುದೀಪ್​, ದುನಿಯಾ ವಿಜಯ್​, ಕೃಷ್ಣ ಅಜಯ್​ ರಾವ್​, ಗಣೇಶ್​ ಮುಂತಾದ ನಟರಿಗೆ ಆ್ಯಕ್ಷನ್​-ಕಟ್​ ಹೇಳಿ ಸೈ ಎನಿಸಿಕೊಂಡರು. ಈಗ ಅವರು ನಿರ್ದೇಶನ ಮಾಡಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್​ ಮುಂತಾದವರು ನಟಿಸಿದ್ದು, ಜುಲೈ 28ರಂದು ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.