‘ಟಾಕ್ಸಿಕ್’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್; ಸಿನಿಮಾದ ಅವಧಿ 3 ಗಂಟೆ 14 ನಿಮಿಷ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಕ್ತಾಯ ಆಗಿದೆ. ಅಂದುಕೊಂಡಂತೆಯೇ ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಈ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 14 ನಿಮಿಷ ಇದೆ. ಆಗಸ್ಟ್ 26ರಂದು ವಿಶ್ವಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಟಾಕ್ಸಿಕ್’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್; ಸಿನಿಮಾದ ಅವಧಿ 3 ಗಂಟೆ 14 ನಿಮಿಷ
Toxic

Updated on: Aug 20, 2026 | 10:54 PM

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಆಗಿದೆ. ಈಗಾಗಲೇ ಈ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡಲಾಗಿದೆ. ಬಹುಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಯಶ್ (Yash), ರುಕ್ಮಿಣಿ ವಸಂತ್ ಮುಂತಾದವರು ನಟಿಸಿದ ಈ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರು ‘ಎ’ ಪ್ರಮಾಣಪತ್ರ (A Certificate) ನೀಡಿದ್ದಾರೆ. ಅಂದರೆ, 18 ವರ್ಷ ಮೇಲ್ಪಟ್ಟ ವಯಸ್ಕರು ಮಾತ್ರ ‘ಟಾಕ್ಸಿಕ್’ ನೋಡಬಹುದು. ಸೆನ್ಸಾರ್ ಪ್ರಮಾಣಪತ್ರದ ಕಾಪಿ ಲಭ್ಯವಾಗಿದ್ದು, ಸಿನಿಮಾದ ಅವಧಿ ಎಷ್ಟು ಎಂಬುದು ಕೂಡ ಗೊತ್ತಾಗಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಬಹುದೊಡ್ಡ ಕಥಾಹಂದರ ಇದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಆ ಕಥೆಯನ್ನು ಹೇಳಲು ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಬರೋಬ್ಬರಿ 194.12 ನಿಮಿಷ ತೆಗೆದುಕೊಂಡಿದ್ದಾರೆ. ಅಂದರೆ, ‘ಟಾಕ್ಸಿಕ್’ ಸಿನಿಮಾದ ಒಟ್ಟು ಅವಧಿ 3 ಗಂಟೆ 14 ನಿಮಿಷಗಳು! ಇಷ್ಟು ದೀರ್ಘ ಅವಧಿಯವರೆಗೆ ಪ್ರೇಕ್ಷಕರನ್ನು ಈ ಸಿನಿಮಾ ಯಾವ ರೀತಿ ಹಿಡಿದಿಡುತ್ತದೆ ಎಂಬ ಕೌತುಕ ಇದೆ.

ಮಕ್ಕಳು ಟಾಕ್ಸಿಕ್ ನೋಡಲು ಸಾಧ್ಯವಿಲ್ಲ:

ನಟ ಯಶ್ ಅವರಿಗೆ ಫ್ಯಾಮಿಲಿ ಆಡಿಯನ್ಸ್ ಸಾಕಷ್ಟು ಮಂದಿ ಇದ್ದಾರೆ. ಆದರೆ ‘ಟಾಕ್ಸಿಕ್’ ಸಿನಿಮಾಗೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರವನ್ನು ನೀಡಿರುವುದರಿಂದ ಮಕ್ಕಳ ಜೊತೆ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡಲು ಸಾಧ್ಯವಿಲ್ಲ. ಸಿನಿಮಾದಲ್ಲಿ ಸಾಕಷ್ಟು ಕ್ರೌರ್ಯ, ಬೈಗಳು ಹಾಗೂ ಹಸಿಬಿಸಿ ದೃಶ್ಯಗಳು ಇರುವ ಕಾರಣಕ್ಕೆ ಎ ಪ್ರಮಾಣಪತ್ರ ನೀಡಲಾಗಿದೆ.

ಇದು ವಯಸ್ಕರಿಗಾಗಿಯೇ ಮಾಡಿದ ಸಿನಿಮಾ:

ಈ ಸಿನಿಮಾದ ಟೈಟಲ್ ಘೋಷಣೆ ಆದಾಗಲೇ ಪ್ರೇಕ್ಷಕರಿಗೆ ಒಂದು ಕಲ್ಪನೆ ಮೂಡಿತ್ತು. ಶೀರ್ಷಿಕೆ ಜೊತೆ ಇರುವ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಟ್ಯಾಗ್ ಲೈನ್ ಗಮನ ಸೆಳೆದಿತ್ತು. ಅಂದರೆ, ಇದು ವಯಸ್ಕರಿಗಾಗಿ ಮಾಡಿರುವ ಸಿನಿಮಾ ಎಂಬುದು ಸ್ಪಷ್ಟವಾಗಿತ್ತು. ಅಲ್ಲದೇ, ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಆದಾಗ ಆ ವಿಷಯ ಇನ್ನಷ್ಟು ಖಚಿತವಾಯಿತು. ಹಾಗಾಗಿ ನಿರೀಕ್ಷೆಯಂತೆಯೇ ಈ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 21ರಂದು ‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಬುಕಿಂಗ್ ಶುರುವಾಗುತ್ತಿದೆ. ಮೊದಲ ದಿನವೇ ಭರ್ಜರಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ. ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದವರು ನಟಿಸಿರುವ ಈ ಸಿನಿಮಾ ವಿಶ್ವಾದ್ಯಂತ ಆಗಸ್ಟ್ 26ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us