ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ನೀಡಿದ್ದಾರೆ ನಟ ಯಶ್ (Yash). ಇತ್ತೀಚೆಗಷ್ಟೆ ಅವರು ತಮ್ಮ ಮುಂದಿನ ಸಿನಿಮಾದ ಹೆಸರು, ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಯಶ್ರ ಮುಂದಿನ ಸಿನಿಮಾಕ್ಕೆ ‘ಟಾಕ್ಸಿಕ್’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಪೋಸ್ಟರ್ ಸಖತ್ ಸ್ಟೈಲಿಷ್ ಆಗಿದೆ. ಕೈಯಲ್ಲಿ ಹಳೆಯ ಕಾಲದ ಮಷಿನ್ ಗನ್ ಹಿಡಿದು, ಬಾಯಲ್ಲಿ ಸಿಗಾರ್ ಕಚ್ಚಿ, ಕೌಬಾಯ್ ಟೋಪಿ ಧರಿಸಿರುವ ವ್ಯಕ್ತಿಯ ಚಿತ್ರ ಕುತೂಹಲ ಮೂಡಿಸುತ್ತಿದೆ. ವಿಶೇಷವೆಂದರೆ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್.
ಕನ್ನಡದ ನಿರ್ದೇಶಕರು ಸೇರಿದಂತೆ, ಟಾಲಿವುಡ್, ಬಾಲಿವುಡ್ಗಳ ನಿರ್ದೇಶಕರುಗಳು ಸಹ ಯಶ್ಗೆ ಕತೆ ಹೇಳಿದ್ದರು ಎನ್ನಲಾಗಿದೆ. ಆದರೆ ಎಲ್ಲರ ಆಫರ್ ಅನ್ನು ತಿರಸ್ಕರಿಸಿದ್ದ ಯಶ್, ಕೇವಲ ಎರಡು ಸಿನಿಮಾಗಳನ್ನಷ್ಟೆ ನಿರ್ದೇಶನ ಮಾಡಿರುವ ಗೀತು ಮೋಹನ್ದಾಸ್ಗೆ ತಮ್ಮ ಮುಂದಿನ ಸಿನಿಮಾದ ಕ್ಯಾಪ್ಟನ್ ಸೀಟ್ ನೀಡಿದ್ದಾರೆ. ಗೀತು ನಿರ್ದೇಶಿಸಿರುವ ಎರಡೇ ಸಿನಿಮಾ, ಎರಡೂ ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸಕ್ಸಸ್ ಆಗಿಲ್ಲ. ಆದರೆ ಆ ಎರಡೂ ಸಿನಿಮಾಗಳು, ಗೀತು ಮೋಹನ್ದಾಸ್ರ ನಿಪುಣತೆಯನ್ನು, ಪ್ರತಿಭೆಯನ್ನು ಸಾರಿದ್ದವು.
ಕೆಲವು ಮೂಲಗಳ ಪ್ರಕಾರ, ಯಶ್ ಹಾಗೂ ಗೀತು ಮೋಹನ್ದಾಸ್ ನಡುವೆ ‘ಟಾಸ್ಕಿಕ್’ ಸಿನಿಮಾದ ಕತೆಯ ಚರ್ಚೆ ನಡೆಯಲು ಆರಂಭಿಸಿ ಎರಡು ವರ್ಷಗಳಾಗಿದೆ. ಸತತ ಎರಡು ವರ್ಷಕ್ಕೂ ಹೆಚ್ಚು ಕಾಲ ಕತೆಯ ಬಗ್ಗೆ ಚರ್ಚಿಸಿ, ಚಿತ್ರಕತೆಯನ್ನು ಅಂತಿಮಗೊಳಿಸಿ, ಈಗ ಸಿನಿಮಾದ ‘ಟೈಟಲ್’ ಘೋಷಿಸಿ ಚಿತ್ರೀಕರಣಕ್ಕೆ ಇಳಿಯಲಾಗುತ್ತಿದೆ. ಎರಡು ವರ್ಷದ ಹಿಂದೆಯೇ ಗೀತು ಮೋಹನ್ದಾಸ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದರು.
ಇದನ್ನೂ ಓದಿ:‘ಟಾಕ್ಸಿಕ್’ ಜೊತೆಗೆ ಚಿತ್ರೀಕರಣಗೊಳ್ಳಲಿದೆ ಯಶ್ರ ಮತ್ತೊಂದು ಸಿನಿಮಾ
ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದ ಗೀತು ಮೋಹನ್ದಾಸ್, ‘‘ನನ್ನ ಮುಂದಿನ ಸಿನಿಮಾ ಒಂದು ಗ್ಯಾಂಗ್ಸ್ಟರ್ ಸಿನಿಮಾ ಆಗಲಿರಲಿದೆ. ಆದರೆ ಕತೆಯಲ್ಲಿ ಮಹಿಳೆಯ ಅಂಶ ಪ್ರಧಾನವಾಗಿರಲಿದೆ’’ ಎಂದಿದ್ದರು. ಗೀತು ಮೋಹನ್ದಾಸ್ರ ಅದೇ ಕತೆ ಈಗ ‘ಟಾಸ್ಕಿಕ್’ ಸಿನಿಮಾ ಆಗುತ್ತಿದೆ. ‘ಟಾಸ್ಕಿಕ್’ ಒಬ್ಬ ಗ್ಯಾಂಗ್ಸ್ಟರ್ನ ಕತೆ ಆದರೆ ಆ ಕತೆಯಲ್ಲಿ ಮಹಿಳೆಯ ಪ್ರಧಾನ ಪಾತ್ರ ವಹಿಸುತ್ತಾರೆ.
‘ಟಾಸ್ಕಿಕ್’ ಸಿನಿಮಾದ ಚಿತ್ರೀಕರಣವನ್ನು ಯಶ್ ಈಗಾಗಲೇ ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಸಿನಿಮಾಕ್ಕೆ ಹಾಲಿವುಡ್ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು ಕರೆತಂದಿದ್ದಾರೆ. ಅದ್ಭುತವಾದ ಆಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ. ಅದರ ಜೊತೆಗೆ ಭಾವುಕ ಎಳೆಯೂ ಸಹ ಕತೆಯಲ್ಲಿ ಅಡಕವಾಗಿರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ