ಸ್ಯಾಂಡಲ್ವುಡ್ ರಗಡ್ ಸಿನಿಮಾಗಳ ಮೂಲಕವೇ ಸಂಚಲನ ಸೃಷ್ಟಿಸುವ ಸುಕ್ಕಾ ಸೂರಿ ಒಂದೆಡೆಯಾದರೆ, ಹನಿ ಹನಿ ಪ್ರೇಮ್ ಕಹಾನಿ ಮೂಲಕ ರೋಮ್ಯಾಂಟಿಕ್ ಫೀಲಿಂಗ್ ಮೂಡಿಸುವ ಯೋಗರಾಜ್ ಭಟ್ ಇನ್ನೊಂದೆಡೆ. ಈ ಜೋಡಿ ಜೊತೆಯಾದಾಗ ಸೃಷ್ಟಿಯಾಗಿದ್ದೆ ‘ರಂಗ ಎಸ್ಎಸ್ಎಲ್ಸಿ’, ‘ಪರಮಾತ್ಮ’ದಂತಹ ವಿಭಿನ್ನ ಚಿತ್ರಗಳು. ಅದರಲ್ಲೂ ಸೂರಿ ನಿರ್ದೇಶಿಸಿದ ಎಲ್ಲಾ ಚಿತ್ರಗಳಿಗೆ ಭಟ್ರ ಟಚ್ ಅಂತು ಇದ್ದೇ ಇರುತ್ತೆ. ಹಾಗೆಯೇ ಭಟ್ರ ಚಿತ್ರಗಳಲ್ಲಿ ಸೂರಿ ಕೂಡ ಒಂದಷ್ಟು ಕೈಯಾಡಿಸುತ್ತಾರೆ ಎಂಬುದು ಗಾಂಧಿನಗರದ ಮಾತು. ಇದೀಗ ಇದೇ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಇನ್ನು ಸುಕ್ಕಾ-ಮಳೆ ಜೊತೆಯಾದರೆ ಅಲ್ಲಿ ವಿ ಹರಿಕೃಷ್ಣ ಅವರ ಗಾನ ಬಜಾನವಂತು ಕೇಳಿಯೇ ಕೇಳುತ್ತೆ. ಅದರಂತೆ ಹರಿಕೃಷ್ಣ ಕೂಡ ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಇದಲ್ಲದೆ ಸೂರಿ-ಭಟ್ರು ತಂಡದ ಖಾಯಂ ಸದಸ್ಯರಾಗಿ ನಟ-ನಿರ್ದೇಶಕ ವಿಕಾಸ್ ಕೂಡ ಇಲ್ಲಿ ಕೆಲಸ ಮಾಡಲಿದ್ದಾರೆ.
ಆದರೆ ಇದು ಯಾವ ಚಿತ್ರ, ಹೊಸ ಚಿತ್ರದ ಟೈಟಲ್ ಏನು ಎಂಬುದರ ಬಗ್ಗೆ ಭಟ್ರು ಹೆಚ್ಚಿನ ಮಾಹಿತಿ ಮಾತ್ರ ಬಿಟ್ಟು ಕೊಟ್ಟಿಲ್ಲ. ಇದಾಗ್ಯೂ ಈ ತಂಡ ಜೊತೆಗೂಡಿದ್ದು ರಾಜ್ಯದ ಕೃಷಿ ಮಂತ್ರಿಗಳು ಸನ್ಮಾನ್ಯ ಶ್ರೀ ಬಿ.ಸಿ.ಪಾಟೀಲ್ ಅವರ ಮನೆಯಲ್ಲಿ ಎಂಬುದು ವಿಶೇಷ. ಅಂದರೆ ಈ ಚಿತ್ರಕ್ಕೂ ಬಿಸಿ ಪಾಟೀಲ್ಗೂ ನೇರ ಕನೆಕ್ಷನ್ ಇರುವುದಂತು ಸತ್ಯ. ಕೆಲ ಮೂಲಗಳ ಪ್ರಕಾರ ಭಟ್ರ ಹೊಸ ಚಿತ್ರಕ್ಕೆ ಬಿಸಿ ಪಾಟೀಲ್ ಅವರ ಮಗಳು ಶೃತಿ ಪಾಟೀಲ್ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಭಟ್ರ ಗ್ಯಾಂಗ್ ಹೊಸ ಚಿತ್ರದ ಫೈನಲ್ ಮಾತುಕತೆಗೆ ಬಿಸಿ ಪಾಟೀಲ್ ಅವರನ್ನು ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿರುವ ಯೋಗರಾಜ್ ಭಟ್ರು, ಒಂದು ಅದ್ಭುತ ಸಿನಿಮಾ ಲೈನ್ ಅಪ್ ಆಗಿದೆ. ಸ್ನೇಹಿತರೆಲ್ಲರ ಮುದ್ದಾಟ ಗುದ್ದಾಟ ಹಾಗು ಸಪೋರ್ಟ್ ಜೊತೆ ಈ ಚಿತ್ರವನ್ನು ನಾನೇ ನಿರ್ದೇಶನ ಮಾಡಲಿದ್ದೇನೆ ಎಂದಿದ್ದಾರೆ. ಇನ್ನು ತಾರಾ ಬಳಗ ಕೂಡ ಅದ್ಭುತವಾಗಿದೆ. ಆದರೆ ಅದು ಯಾರು ಎಂಬುದನ್ನು ಇವಾಗಲೇ ಹೇಳಲ್ಲ. ಶೀಘ್ರದಲ್ಲೇ ಬಾಕಿ ಸುದ್ದಿ ನೀಡಲಿದ್ದೇನೆ. ಅದರ ಜೊತೆ ನನ್ನೆಲ್ಲಾ ಗುರುಗಳಾದ ನನ್ನ ಗೆಳೆಯರಿಗೆ ಗುರು ಪೂರ್ಣಿಮಾ ಶುಭಾಶಯಗಳು ತಿಳಿಸಿದ್ದಾರೆ ಯೋಗರಾಜ್ ಭಟ್ರು.
ಒಂದೆಡೆ ಭಟ್ರು ಗಾಳಿಪಟ-2 ಮೂಲಕ ಮತ್ತೊಮ್ಮೆ ಗೆಳೆಯರ ರೋಮ್ಯಾಂಟಿಕ್ ಕಥೆ ಹೇಳಲು ರೆಡಿಯಾಗುತ್ತಿದ್ದಾರೆ. ಇನ್ನೊಂದೆಡೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಮೂಲಕ ಸೂರಿ ರಫ್ ಅ್ಯಂಡ್ ಟಫ್ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಅಣಿಯಾಗುತ್ತಿದ್ದಾರೆ. ಇದರ ನಡುವೆ ಮುಂಗಾಳೆ ಮಳೆಯ ಸೃಷ್ಟಿಕರ್ತ ಹಾಗೂ ದುನಿಯಾ ಮೇಕರ್ ಮತ್ತೊಮ್ಮೆ ಜೊತೆಯಾಗುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: IPL 2021: ಐಪಿಎಲ್ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್ ಪ್ಲ್ಯಾನ್..!
ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
Published On - 10:49 pm, Sat, 24 July 21