Yuvarathnaa: ‘ಪುನೀತ್​ ರಾಜ್​ಕುಮಾರ್​ಗೆ ಯಾಕೆ ಇಂಥ ಅನ್ಯಾಯ?’ ಸರ್ಕಾರದ ವಿರುದ್ಧ ಸಿಡಿದೆದ್ದ ಅಪ್ಪು ಫ್ಯಾನ್ಸ್​!

|

Updated on: Apr 03, 2021 | 12:58 PM

Puneeth Rajkumar: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿ ಮಾಡಬೇಕು ಎಂಬ ಸರ್ಕಾರದ ಆದೇಶದಿಂದ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ತೀವ್ರ ಬೇಸರ ಆಗಿದೆ. ಹಾಗಂತ ಫ್ಯಾನ್ಸ್​ ಕೈ ಕಟ್ಟಿ ಕುಳಿತಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸರ್ಕಾರವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

Yuvarathnaa: ‘ಪುನೀತ್​ ರಾಜ್​ಕುಮಾರ್​ಗೆ ಯಾಕೆ ಇಂಥ ಅನ್ಯಾಯ?’ ಸರ್ಕಾರದ ವಿರುದ್ಧ ಸಿಡಿದೆದ್ದ ಅಪ್ಪು ಫ್ಯಾನ್ಸ್​!
ಪುನೀತ್​ ರಾಜ್​ಕುಮಾರ್​
Follow us on

ಭಾರೀ ನಿರೀಕ್ಷೆಗಳೊಂದಿಗೆ ‘ಯುವರತ್ನ’ ಸಿನಿಮಾ ಏ.1ರಂದು ರಿಲೀಸ್​ ಆಗಿತ್ತು. ಆದರೆ ಬಿಡುಗಡೆಯಾದ ಎರಡೇ ದಿನಕ್ಕೆ ಈ ಚಿತ್ರಕ್ಕೆ ಹೊಸ ನಿಯಮದ ಬಿಸಿ ತಟ್ಟಿದೆ. ಒಂದೆಡೆ ಪೈರಸಿ ವಿರುದ್ಧ ಹೋರಾಡುತ್ತಿದ್ದ ಚಿತ್ರತಂಡಕ್ಕೆ ಈಗ ಹೊಸ ತಲೆನೋವು ಆರಂಭ ಆಗಿದೆ. ಚಿತ್ರತಂಡಕ್ಕೆ ಮಾತ್ರವಲ್ಲದೆ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೂ ಇದರಿಂದ ತೀವ್ರ ಬೇಸರ ಆಗಿದೆ. ಹಾಗಂತ ಫ್ಯಾನ್ಸ್​ ಕೈ ಕಟ್ಟಿ ಕುಳಿತಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸರ್ಕಾರವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಹ್ಯಾಶ್​ಟ್ಯಾಗ್​ ಅಭಿಯಾನ ಶುರುಮಾಡಿಕೊಂಡಿದ್ದಾರೆ.

‘ನಟ ಸಾರ್ವಭೌಮ’ ಬಳಿಕ ಪುನೀತ್​ ನಟನೆಯ ಯಾವುದೇ ಸಿನಿಮಾ ತೆರೆಕಂಡಿರಲಿಲ್ಲ. ಬರೋಬ್ಬರಿ 2 ವರ್ಷಗಳ ನಂತರ ‘ಯುವರತ್ನ’ ಮೂಲಕ ಅಪ್ಪು ಅವರನ್ನು ಚಿತ್ರಮಂದಿರದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ಶೇ.50ರಷ್ಟು ಮಾತ್ರ ಆಸನ ಭರ್ತಿ ಮಾಡಬೇಕು ಎಂಬ ಸರ್ಕಾರದ ಆದೇಶದಿಂದಾಗಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ಪುನೀತ್​ ಅವರು ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದರು. ಆದರೆ ಇಂದು ಅವರ ಚಿತ್ರಕ್ಕೆ ತೊಂದರೆ ಆಗಿರುವುದು ಫ್ಯಾನ್ಸ್​ ಬೇಸರಕ್ಕೆ ಕಾರಣ ಆಗಿದೆ. ಯಾವುದೇ ಮುನ್ಸೂಚನೆ ನೀಡದೇ ಹೀಗೆ ಏಕಾಏಕಿ ನಿಯಮ ಜಾರಿ ಮಾಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣ ಆಗಿದೆ. ಇದನ್ನು ಸೋಶಿಯಲ್​ ಮೀಡಿಯಾ ಮೂಲಕ ಪ್ರಶ್ನಿಸಲಾಗುತ್ತಿದೆ.

#WeWant100PercentOccupancy #SaveCinema ಮುಂತಾದ ಹ್ಯಾಶ್​ಟ್ಯಾಗ್​ಗಳನ್ನು ಬಳಸಿ ಅಪ್ಪು ಅಭಿಮಾನಿಗಳು ಟ್ವೀಟ್​ ಮಾಡುತ್ತಿದ್ದಾರೆ. ಅದರ ಜೊತೆಗೆ ರಾಜಕೀಯದವರು ನಡೆಸಿದ ಸಮಾವೇಶಗಳ ಫೋಟೋಗಳನ್ನು ಶೇರ್​ ಮಾಡಲಾಗುತ್ತಿದೆ. ಇಂಥ ಪೊಲಿಟಿಕಲ್​ ಕ್ಯಾಂಪೇನ್​ಗಳಲ್ಲಿ ಕೊರೊನಾ ಬರುವುದಿಲ್ಲವೇ? ಬರೀ ಸಿನಿಮಾಗೆ ಯಾಕೆ ಈ ರೀತಿ ಅನ್ಯಾಯ ಮಾಡ್ತೀರಿ ಎಂದು ಜನರು ಸರ್ಕಾರದ ನಡೆಯನ್ನು ವ್ಯಂಗ್ಯ ಮಾಡುತ್ತಿದ್ದಾರೆ.

ಸರ್ಕಾರ ತನ್ನ ನಿರ್ಧಾರ ಬದಲಿಸುವವರೆಗೂ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಮುಂದುವರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಯುವರತ್ನ ಚಿತ್ರಕ್ಕೆ ಬೆಂಬಲ ನೀಡಿ, ಶುಕ್ರವಾರ (ಮಾ.2) ರಾತ್ರಿಯಿಂದಲೇ ವಿಡಿಯೋಗಳನ್ನು ಮಾಡಿ ಹರಿಬಿಡಲಾಗುತ್ತಿದೆ. ಸಿಎಂ ನಿವಾಸದ ಬಳಿ ಅಪ್ಪು ಫ್ಯಾನ್ಸ್​ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಬಳಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ. ಇನ್ನು ಪುನೀತ್​ ಕೂಡ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಮೊದಲೇ ಹೇಳಿದ್ದರೆ ನಾವು ಸಿನಿಮಾ ರಿಲೀಸ್​ ಮಾಡುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ವಿಚಾರವಾಗಿ ಶನಿವಾರ (ಮಾ.3) ಸಭೆ ನಡೆಸಲಾಗಿದೆ. ಸದ್ಯ ಎದುರಾಗಿರುವ ಬಿಕ್ಕಟ್ಟಿನ ಕುರಿತು ಚರ್ಚೆ ಮಾಡಲಾಗಿದ್ದು, ಹೀಗೆ ಏಕಾಏಕಿ ಆದೇಶ ಹೊರಡಿಸಿದರೆ ಏನು ಮಾಡುವುದು ಎಂದು ಫಿಲ್ಮ್ ಚೇಂಬರ್​ ಅಧ್ಯಕ್ಷ ಜೈರಾಜ್​ ಪ್ರಶ್ನಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮಂಡಳಿಯ ಪ್ರಮುಖರು ನಿರ್ಧರಿಸಿದ್ದಾರೆ.

‘50% ಆಕ್ಯೂಪೆನ್ಸಿ ಆದೇಶ ಚಿತ್ರರಂಗಕ್ಕೆ ಆಘಾತಕಾರಿ. ಯುವರತ್ನ ರಿಲೀಸ್ ಆದ ಒಂದೇ ದಿನಕ್ಕೆ ಈ ರೀತಿ ಆಗಿರೋದರಿಂದ ಅವರಿಗೆ ಹೆಚ್ಚು ತೊಂದರೆ ಆಗ್ತಿದೆ. ಮೊದಲೇ ಹೇಳಿದ್ರೆ ರಿಲೀಸ್ ಮುಂದೂಡಬಹುದಿತ್ತು. ಈ ಬಗ್ಗೆ ನಾವು ಸರ್ಕಾರಕ್ಕೆ ಮನವಿ ಮಾಡ್ತಿವಿ. ಇದರಿಂದ ಏನೆಲ್ಲಾ ತೊಂದರೆ ಆಗುತ್ತೆ ಅನ್ನೋದನ್ನ ಮನವರಿಕೆ ಮಾಡಿಕೊಡುತ್ತೇವೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರಮಂದಿರಕ್ಕೆ ಏಕಾಏಕಿ ಪ್ರವೇಶ ನಿರ್ಬಂಧಿಸಿದರೆ ನಾವೇನು ಮಾಡಬೇಕು?; ಸರ್ಕಾರದ ಕ್ರಮಕ್ಕೆ ಪುನೀತ್​ ಬೇಸರ

Lockdown: ಶೇ.50 ಆಸನ ಭರ್ತಿ ಆದೇಶಕ್ಕೆ ಸುದೀಪ್​ ಪ್ರತಿಕ್ರಿಯೆ! ಯುವರತ್ನ ಸಂಕಷ್ಟದ ಬಗ್ಗೆ ಕಿಚ್ಚ ಹೇಳಿದ್ದೇನು?