Lockdown: ಶೇ.50 ಆಸನ ಭರ್ತಿ ಆದೇಶಕ್ಕೆ ಸುದೀಪ್ ಪ್ರತಿಕ್ರಿಯೆ! ಯುವರತ್ನ ಸಂಕಷ್ಟದ ಬಗ್ಗೆ ಕಿಚ್ಚ ಹೇಳಿದ್ದೇನು?
Yuvarathnaa: ಈಗತಾನೇ ಚೇತರಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಶಾಕ್ ಎದುರಾಗಿದೆ. ಶೇ.50ರಷ್ಟು ಆಸನ ಭರ್ತಿ ಮಿತಿ ಹೇರಿರುವುದರಿಂದ ಅನೇಕ ಸಿನಿಮಾಗಳಿಗೆ ತೊಂದರೆ ಆಗಿದೆ. ಈ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಕೊರೊನಾ ವೈರಸ್ ಎರಡನೇ ಅಲೆ ಸೃಷ್ಟಿಸಿರುವ ಅವಾಂತರದಿಂದ ಮತ್ತೆ ಲಾಕ್ಡೌನ್ ಭಯ ಕಾಡುತ್ತಿದೆ. ವೈರಸ್ ಹರಡುವಿಕೆಗೆ ಆದಷ್ಟು ತಡೆಯೊಡ್ಡಲು ಸರ್ಕಾರ ಕಸರತ್ತು ನಡೆಸುತ್ತಿದೆ. ಆ ಪರಿಣಾಮವಾಗಿ ಅನೇಕ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತಿದೆ. ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಒಂದಾದ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗಿದೆ. ಕೇವಲ 50% ಆಸನಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಇದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ.
ಸರ್ಕಾರ ಹೊರಡಿಸಿರುವ ಈ ಹೊಸ ನಿಯಮಾವಳಿಗಳ ಕುರಿತು ಕನ್ನಡ ಚಿತ್ರರಂಗದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವೀಟ್ ಮಾಡುವ ಮೂಲಕ, ಚಿತ್ರಮಂದಿರಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಏಕಾಏಕಿ ಹೊಸ ಆದೇಶ ಜಾರಿ ಮಾಡಿರುವುದರಿಂದ ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಸೇರಿದಂತೆ ಅನೇಕ ಸಿನಿಮಾಗಳಿಗೆ ತೊಂದರೆ ಆಗಿದೆ. ಈ ಬಗ್ಗೆ ಹಲವರು ಸೋಶಿಯಲ್ ಮೀಡಿಯಾ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೊಂದು ಶಾಕಿಂಗ್ ಬೆಳವಣಿಗೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ‘ಮತ್ತೆ ಶೇ.50ರಷ್ಟು ಆಸನಗಳನ್ನಷ್ಟೇ ಮಾತ್ರ ಭರ್ತಿ ಮಾಡಬೇಕು ಎಂದರೆ ಈಗ ತಾನೇ ಬಿಡುಗಡೆ ಆದ ಚಿತ್ರಕ್ಕೆ ಆತಂಕ ಆಗುತ್ತದೆ. ಸರ್ಕಾರದ ನಿಯಮವನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯ ಆಗುತ್ತದೆ. ಇಂಥ ಸಂದರ್ಭವನ್ನು ಎದುರಿಸಿ ಕೂಡ ಗೆಲುವು ಸಾಧಿಸಲಿ ಎಂದು ಯುವರತ್ನ ತಂಡಕ್ಕೆ ಹಾರೈಸುತ್ತೇನೆ‘ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious. @hombalefilms
— Kichcha Sudeepa (@KicchaSudeep) April 3, 2021
ಸರ್ಕಾರದ ನಿರ್ಧಾರ ಸರಿ ಇರಬಹುದು. ಆದರೆ ಇಂಥ ಆದೇಶ ಹೊರಡಿಸುವುದಕ್ಕೂ ಮುನ್ನ ಮಾಹಿತಿ ನೀಡಬೇಕಿತ್ತು ಎಂದು ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಇದೇ ಮಾತನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ನಟ ಡಾಲಿ ಧನಂಜಯ ಅವರು, ‘ಮುಂಚೇನೆ ಹೇಳಿದ್ರೆ ಸಿನಿಮಾ ಬಿಡುಗಡೆನ ಮುಂದೂಡ್ತಿದ್ವಲ್ಲ ಸರ್. ಇದು ಅನ್ಯಾಯ ಅಲ್ವ?’ ಎಂದು ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದಾರೆ.
ಲಾಕ್ಡೌನ್ ಆದೇಶ ಜಾರಿ ಆಗುವುದಕ್ಕೂ ಮುನ್ನವೇ ಶನಿವಾರ ಮತ್ತು ಭಾನುವಾರದ ಟಿಕೆಟ್ಗಳನ್ನು ಪ್ರೇಕ್ಷಕರು ಆನ್ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದ್ದರು. ಅಂಥ ಶೋಗಳಲ್ಲಿ ಪ್ರೇಕ್ಷಕರನ್ನು ಹೇಗೆ ಕೂರಿಸಬೇಕು ಎಂಬ ಗೊಂದಲ ಮನೆ ಮಾಡಿದೆ. ದಿಢೀರ್ ಎಂದು ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಪುನೀತ್ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಹಾಗಾಗಿ ಸಿಎಂ ನಿವಾಸದ ಬಳಿ ಅಪ್ಪು ಫ್ಯಾನ್ಸ್ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಬಳಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ಯುವರತ್ನಕ್ಕೆ ಮೊದಲ ದಿನವೇ ಶುರುವಾಯ್ತು ಪೈರಸಿ ಕಾಟ; ಎಲ್ಲೇ ಪೈರಸಿ ಲಿಂಕ್ ಸಿಕ್ಕರೂ ರಿಪೋರ್ಟ್ ಮಾಡಿ ಎಂದ ಚಿತ್ರತಂಡ
ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು
(Lockdown in Karnataka: Kannada film industry opposes 50 percent occupancy guidelines)