ಮಲಯಾಳಂನಲ್ಲಿ ಸಿನಿಮಾ ಆಗಲಿದೆ ಶಿರೂರು ಗುಡ್ಡ ಕುಸಿತ ಪ್ರಕರಣ

Shiroor land slide: ಕಳೆದ ವರ್ಷ ನಡೆದ ಶಿರೂರು ಗುಡ್ಡ ಕುಸಿತ ಘಟನೆಯನ್ನು ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾ ಮಾಡಲಾಗುತ್ತಿದೆ. ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್ ಎಂಬುವರು ಸಿಲುಕಿಕೊಂಡಿದ್ದರು. ಅವರ ರಕ್ಷಣೆಗಾಗಿ ಸತತ ಪ್ರಯತ್ನ ಮಾಡಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಆದರೆ ಮೂರು ತಿಂಗಳ ಬಳಿಕ ಅವರ ಮೃತದೇಹ ದೊರಕಿತ್ತು.

ಮಲಯಾಳಂನಲ್ಲಿ ಸಿನಿಮಾ ಆಗಲಿದೆ ಶಿರೂರು ಗುಡ್ಡ ಕುಸಿತ ಪ್ರಕರಣ
Shirur

Updated on: Jul 30, 2025 | 7:17 PM

ಉಡುಪಿ ಜಿಲ್ಲೆಯ, ಬೈಂದೂರು ಜಿಲ್ಲೆಯ ಶಿರೂರಿನಲ್ಲಿ ನಡೆದ ಘಟನೆಯೊಂದು ಕೇರಳದಲ್ಲಿ ಸಿನಿಮಾ ಆಗಿ ರೂಪ ಪಡೆಯಲಿದೆ. ನಿಜ ಘಟನೆಗಳನ್ನು ಸಿನಿಮಾ ಮಾಡುವಲ್ಲಿ ಪರಿಣಿತರಾಗಿರುವ ಮಲಯಾಳಿ ಚಿತ್ರರಂಗದವರು ಕಳೆದ ವರ್ಷ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಮಾದವನ್ನು ಸಿನಿಮಾ ಮಾಡಲಿದ್ದಾರೆ. ಸಿನಿಮಾಕ್ಕೆ ಕತೆ ಬರೆಯಲಿರುವುದು ಕೇರಳದ ಶಾಸಕ ಎಕೆಎಂ ಅಶ್ರಫ್.

ಕಳೆದ ವರ್ಷ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರ ಬದಿಯ ಗುಡ್ಡ ಕುಸಿದಿತ್ತು. ಆ ಘಟನೆಯಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಇಬ್ಬರ ಶವ ಈ ವರೆಗೆ ಸಿಕ್ಕಿಲ್ಲ. ಮೃತಪಟ್ಟವರಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್ ಸಹ ಇದ್ದರು. ಆದರೆ ಅರ್ಜುನ್ ಮೃತದೇಹ ಸಿಗದೇ ಇದ್ದ ಕಾರಣ ಆತ ಬದುಕಿದ್ದಾನೆಂದು ನಂಬಲಾಗಿತ್ತು. ಕೇರಳದಲ್ಲಿ ಅರ್ಜುನ್ ಬದುಕಿ ಬರಲೆಂದು ಲಕ್ಷಾಂತರ ಮಂದಿ ಪ್ರಾರ್ಥಿಸಿದ್ದರು. ಸಾಮೂಹಿಕ ಪ್ರಾರ್ಥನೆಗಳನ್ನು ಸಹ ನಡೆಸಿದ್ದರು. ಆದರೆ ಸತತ ಕಾರ್ಯಾಚರಣೆ ಬಳಿಕವೂ ಸಹ ಅರ್ಜುನ್ ಬದುಕಲಿಲ್ಲ. ಬರೋಬ್ಬರಿ ಮೂರು ತಿಂಗಳ ಬಳಿಕ ಅರ್ಜುನ್ ಮೃತದೇಹ ಪತ್ತೆ ಆಯ್ತು.

ಅರ್ಜುನ್ ಹುಡುಕಾಟದ ಕಾರ್ಯಾಚರಣೆ ವೇಲೆ ಶಾಸಕ ಅಶ್ರಫ್ ಸ್ಥಳದಲ್ಲಿಯೇ ಹಾಜರಿದ್ದರು. ಎಲ್ಲ ಕಾರ್ಯಾಚರಣೆಗಳನ್ನು ಅವರು ಹತ್ತಿರದಿಂದ ಗಮನಿಸಿದರು. ಇದೀಗ ಅಶ್ರಫ್ ಅವರು ತಮ್ಮ ಆ ಅನುಭವವನ್ನು ಆಧರಿಸಿ ಶಿರೂರು ಗುಡ್ಡ ಕುಸಿತದ ಬಗ್ಗೆ ಕತೆ ಬರೆಯಲಿದ್ದಾರೆ. ಆ ಕಥೆಯೇ ಸಿನಿಮಾ ಸಹ ಆಗಲಿದೆ. ಕೋಯಿಕೋಡಿನ ಅರ್ಜುನ್ ಶವ ಹೊರತೆಗೆಯುವ ಕಾರ್ಯಾಚರಣೆ ಬಲು ರೋಚಕವಾಗಿತ್ತು. ಆ ರೋಚಕತೆ ಮತ್ತು ಅವರ ಕುಟುಂಬದ ಭಾವುಕತೆ, ಕೇರಳದ ಜನರು ಅರ್ಜುನ್​ಗಾಗಿ ಮರುಗಿದ್ದು ಎಲ್ಲವೂ ಸಿನಿಮಾಕ್ಕೆ ವಸ್ತುವಾಗಲಿದೆ.

ಇದನ್ನೂ ಓದಿ:ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಗ್ರಾಮಸ್ಥರ ಆತಂಕ

ಕೇರಳಿಗರು ನಿಜ ಘಟನೆಗಳನ್ನು ಅದ್ಭುತವಾಗಿ ತೆರೆಗೆ ತರುವುದರಲ್ಲಿ ಸಿದ್ಧಹಸ್ತರು. 2018ರ ಕೇರಳ ಪ್ರವಾಹವನ್ನು ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಪಡೆದರು. ಕಳೆದ ವರ್ಷ ಬಿಡುಗಡೆ ಆದ ‘ಮಂಜುಮೆಲ್ ಬಾಯ್ಸ್’ ಸಿನಿಮಾ ಸಹ ನಿಜ ಘಟನೆ ಆಧರಿಸಿದ ಸಿನಿಮಾ. ಅದೂ ಸಹ ಬ್ಲಾಕ್ ಬಸ್ಟರ್ ಆಯ್ತು. ನಿಫಾ ವೈರಸ್ ಬಗ್ಗೆ ‘ವೈರಸ್’ ಹೆಸರಿನ ಸಿನಿಮಾ ಮಾಡಿ ಅದು ಸಹ ಬ್ಲಾಕ್ ಬಸ್ಟರ್ ಆಯ್ತು. ಇರಾಖ್​ನಲ್ಲಿ ಸಿಲುಕಿಕೊಂಡಿದ್ದ ಕೇರಳದ ಮಹಿಳೆಯರನ್ನು ರಕ್ಷಣೆ ಮಾಡಿದ್ದ ಘಟನೆಯನ್ನು ‘ಟೇಕ್ ಆಫ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅದೂ ಸಹ ಸೂಪರ್ ಹಿಟ್ ಆಯ್ತು, ರಾಷ್ಟ್ರಪ್ರಶಸ್ತಿಯನ್ನು ಸಹ ಗೆದ್ದಿತು. ‘ಎನ್ನು ನಿಂತೆ ಮೋಯಿದ್ಧೀನ್’, ‘ಸೆಲುಲಾಯ್ಡ್’, ಗುಡ್ಡ ಕುಸಿತದಲ್ಲಿ ಸಿಲುಕಿ ಬದುಕಿಬಂದ ವ್ಯಕ್ತಿಯ ಕತೆಯನ್ನು ಒಳಗೊಂಡ ‘ಮಲಯಾಳಕ್ಕುಂಜು’ ಸಿನಿಮಾ ಕೆಲ ವರ್ಷಗಳ ಹಿಂದೆ ಬಂದಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ