ಕರವೇ ಕಾರ್ಯಕರ್ತರಿಂದ ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ತಡೆ

| Updated By: ರಾಜೇಶ್ ದುಗ್ಗುಮನೆ

Updated on: Sep 29, 2023 | 6:38 AM

Siddharth: ಬೆಂಗಳೂರಿನಲ್ಲಿ ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ಕರವೇ ಕಾರ್ಯಕರ್ತರು ತಡೆ. ಸಿದ್ಧಾರ್ಥ್, ತಮ್ಮ 'ಚಿತ್ತ' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಸಿನಿಮಾ ಕುರಿತು ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ನುಗ್ಗಿ ಕಾರ್ಯಕ್ರಮವನ್ನು ತಡೆದಿದ್ದಾರೆ.

ಕರವೇ ಕಾರ್ಯಕರ್ತರಿಂದ ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ತಡೆ
ಸಿದ್ಧಾರ್ಥ್
Follow us on

ತಮಿಳು ಮೂಲದ ನಟ ಸಿದ್ಧಾರ್ಥ್ (Siddharth), ಬೆಂಗಳೂರಿನಲ್ಲಿ ಮಾಡುತ್ತಿದ್ದ ಸುದ್ದಿಗೋಷ್ಠಿಯನ್ನು ಕರವೇ ಕಾರ್ಯಕರ್ತರು ತಡೆದಿದ್ದಾರೆ. ಸಿದ್ಧಾರ್ಥ್ ನಟನೆಯ ‘ಚಿಕ್ಕು’ ಸಿನಿಮಾ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಈ ಕುರಿತು ಇಂದು (ಸೆಪ್ಟೆಂಬರ್ 28) ಬೆಂಗಳೂರಿನ ಮಲ್ಲೇಶ್ವರದ ಎಸ್​ಆರ್​ವಿಯಲ್ಲಿ ನಟ ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದರು, ಸುದ್ದಿಗೋಷ್ಠಿಗೆ ನುಗ್ಗಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ಸುದ್ದಿಗೋಷ್ಠಿಯನ್ನು ತಡೆದಿದ್ದಾರೆ.

ವೇದಿಕೆ ಮೇಲೆ ನಟ ಸಿದ್ಧಾರ್ಥ್ ತಮ್ಮ ಸಿನಿಮಾ ಕುರಿತಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ನುಗ್ಗಿದ ಕಾರ್ಯಕರ್ತರು, ‘ಕಾವೇರಿ ವಿವಾದ ಕಾವೇರಿರುವ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಆರ್ಡರ್ ಅಲ್ಲ ಬದಲಿಗೆ ಮನವಿ. ಕೂಡಲೇ ಸಿನಿಮಾದ ಪ್ರಚಾರ ನಿಲ್ಲಿಸಿ ಎಂದರು. ಕರವೇ ಕಾರ್ಯಕರ್ತರು ನುಗ್ಗಿದ ಸಂದರ್ಭದಲ್ಲಿ ನಟ ಸಿದ್ಧಾರ್ಥ್, ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಸಿದ್ಧಾರ್ಥ್ ಮಾತನ್ನು ತಡೆದು, ಯಾರೂ ಸಹ ತಮಿಳು ಸಿನಿಮಾಕ್ಕೆ ಪ್ರಚಾರ ನೀಡಬಾರದೆಂದು ಆಗ್ರಹಿಸಿದರು.

ಇದನ್ನೂ ಓದಿ:ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಭಾರಿ ಮಳೆ ಕೊರತೆ; ಇಲ್ಲಿದೆ ವಿವರ

ಸಿದ್ಧಾರ್ಥ್ ಬಳಿಯೂ ಕರವೇ ಕಾರ್ಯಕರ್ತರು ಮನವಿ ಮಾಡಿ, ದಯವಿಟ್ಟು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಮತ್ತೆ ಎಂದಾದರೂ ಕಾರ್ಯಕ್ರಮ ಮಾಡಿಕೊಳ್ಳಿ ಆದರೆ ಈಗ ಬೇಡ. ಇದು ಸೂಕ್ಷ್ಮ ಸಮಯ. ಈ ಸಮಯದಲ್ಲಿ ಎಲ್ಲರೂ ಕಾವೇರಿಗಾಗಿ ಒಗ್ಗೂಡಬೇಕಿದೆ. ಕಾರ್ಯಕ್ರಮವನ್ನು ಈ ಕೂಡಲೇ ಅಂತ್ಯಗೊಳಿಸಿ ಎಂದು ಹೇಳಿದರು. ಸಿದ್ಧಾರ್ಥ್ ಸಹ ಕೂಡಲೇ ಎದ್ದು ದಯವಿಟ್ಟು ಎಲ್ಲರೂ ನನ್ನ ಸಿನಿಮಾ ನೋಡಿ ಎಂದು ಹೇಳಿ ಕೈಮುಗಿದು ವೇದಿಕೆ ಬಿಟ್ಟು ಹೊರಟರು.

ಸಿದ್ಧಾರ್ಥ್ ನಟನೆಯ ‘ಚಿಕ್ಕು’ ಸಿನಿಮಾ ಇಂದಷ್ಟೆ (ಸೆಪ್ಟೆಂಬರ್ 28) ಬಿಡುಗಡೆ ಆಗಿದೆ. ಸಿನಿಮಾವು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬಂದಿದೆ. ‘ಚಿಕ್ಕು’ ಸಿನಿಮಾದ ಕನ್ನಡ ಟೀಸರ್ ಅನ್ನು ನಟ ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಿ ಸಿದ್ಧಾರ್ಥ್​ಗೆ ಶುಭ ಹಾರೈಸಿದ್ದರು. ‘ಚಿಕ್ಕು’ ಸಿನಿಮಾದ ಕನ್ನಡ ಆವೃತ್ತಿ ‘ಚಿಕ್ಕು’ಗೆ ಸ್ವತಃ ನಟ ಸಿದ್ಧಾರ್ಥ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ.

ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇನ್ನೂ ಕೆಲವು ಸಂಘಟನೆಗಳು ಸೆಪ್ಟೆಂಬರ್ 29ಕ್ಕೆ ರಾಜ್ಯ ಬಂದ್​ಗೆ ಕರೆ ನೀಡಿವೆ. ಚಿತ್ರರಂಗ ಸಹ ಬಂದ್​ಗೆ ಬೆಂಬಲ ನೀಡಿದ್ದು, ನಾಳೆ ಚಿತ್ರಮಂದಿರಗಳು ಬಂದ್ ಆಗಿರಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Thu, 28 September 23