ಗೆಳೆಯ ಸಿದ್ಧಾರ್ಥ್ ಅನ್ನು ಕನ್ನಡಕ್ಕೆ ಪರಿಚಯಿಸಿದ ಕಿಚ್ಚ ಸುದೀಪ್
Sudeep-Siddharth: ನಟ ಸುದೀಪ್ ನಟ ಸಿದ್ಧಾರ್ಥ್ ಅನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಜನಪ್ರಿಯವಾಗಿರುವ ಸಿದ್ಧಾರ್ಥ್ರ 'ಚಿಕ್ಕು' ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ.
ನಟ ಕಿಚ್ಚ ಸುದೀಪ್ಗೆ (Kichcha Sudeep) ಹಲವು ಚಿತ್ರರಂಗಗಳಲ್ಲಿ ಆತ್ಮೀಯ ಗೆಳೆಯರಿದ್ದಾರೆ. ಈ ಪ್ಯಾನ್ ಇಂಡಿಯಾ ಸಮಯದಲ್ಲಿ, ಕನ್ನಡಕ್ಕೆ ಎಂಟ್ರಿ ಕೊಡಲಿಚ್ಚಿಸುತ್ತಿರುವ ಹಲವು ಸಿನಿಮಾ ತಂಡಗಳು ಸುದೀಪ್ ಅವರ ನೆರವು ಪಡೆಯುತ್ತಿವೆ. ರಣ್ವೀರ್ ಸಿಂಗ್ರ ’83’ ಸಿನಿಮಾ ನೆಚ್ಚಿಕೊಂಡಿದ್ದು ಸುದೀಪ್ ಅರನ್ನು ಹಾಗೆಯೇ ಬೇರೆ ಸಿನಿಮಾಗಳು ಸಹ ಸುದೀಪ್ ಭರವಸೆ ಮೇಲೆ ಕನ್ನಡಕ್ಕೆ ಬಂದಿವೆ. ಅಂತೆಯೇ ಸುದೀಪ್ಗೆ ತಮ್ಮ ಸಿನಿಮಾಗಳನ್ನು ಹೊರ ರಾಜ್ಯಗಳಿಗೆ ತೆಗೆದುಕೊಂಡು ಹೋಗುವುದು ಸಹ ಬಹಳ ಸುಲಭವೇ ಆಗಿದೆ. ಇದೀಗ ಪರಭಾಷೆಯ ಜನಪ್ರಿಯ ನಟನೊಬ್ಬನನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ ನಟ ಸುದೀಪ್.
ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ಜನಪ್ರಿಯರಾಗಿರುವ ನಟ ಸಿದ್ಧಾರ್ಥ್ ಅನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ ಸುದೀಪ್. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುದೀಪ್, ”ಪ್ರೀತಿಯ ಸಹೋದರ ಸಿದ್ಧಾರ್ಥ್ ಅವರನ್ನು ತುಂಬು ಪ್ರೀತಿಯಿಂದ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದೇನೆ.ಜೊತೆಗೆ ಮೊದಲ ಪ್ರಯತ್ನದಲ್ಲೇ ಕನ್ನಡ ಕಲಿತು ಸಿದ್ಧಾರ್ಥ್ ಅವರದೇ ದ್ವನಿ ನೀಡಿದ್ದಾರೆ. ಕನ್ನಡ ಸಿನಿಮಾ ಲೋಕಕ್ಕೆ ಸ್ವಾಗತ ಗೆಳೆಯ ಸಿದ್ದಾರ್ಥ್” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಿದ್ಧಾರ್ಥ್ ನಟನೆಯ ‘ಚೀಕು’ ಸಿನಿಮಾದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಒಂದೆಡೆ ಸುದೀಪ್, ಇನ್ನೊಂದೆಡೆ ಸಲ್ಮಾನ್; ಒಟ್ಟಿಗೆ ಅನೌನ್ಸ್ ಆಯ್ತು ಕನ್ನಡ-ಹಿಂದಿ ಬಿಗ್ ಬಾಸ್
‘ಚಿಕ್ಕು’ ಸಿನಿಮಾವು ತಂದೆ ಹಾಗೂ ಮಗಳ ನಡುವಿನ ಸಂಬಂಧದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ವೈರಲ್ ಆಗಿದೆ. ಮಗಳ ಮೇಲೆ ದೌರ್ಜನ್ಯವಾದಾಗ ತಂದೆ ಯಾವ ಹಂತಕ್ಕೆ ಹೋಗಿ ಸೇಡು ತೀರಿಸಿಕೊಳ್ಳುತ್ತಾನೆ, ದುಷ್ಟರ ವಿರುದ್ಧ ಹೋರಾಡುತ್ತಾನೆ ಎಂಬ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಸಿದ್ಧಾರ್ಥ್ ನಟಿಸಿದ್ದಾರೆ.
‘ಚಿಕ್ಕು’ ಸಿನಿಮಾವನ್ನು ಎಸ್ಯು ಅರುಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಇ ಟಾಕಿ ಮತ್ತು ಕನ್ನಡದ ಕೆಆರ್ಜಿ ಸ್ಟುಡಿಯೋಸ್. ಕರ್ನಾಟಕದಲ್ಲಿ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ಸಹ ಕೆಆರ್ಜಿ ಸ್ಟುಡಿಯೋಸ್. ಟ್ರೈಲರ್, ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ನಟ ಸಿದ್ಧಾರ್ಥ್ ಅವರೇ ಡಬ್ಬಿಂಗ್ ಮಾಡಿರುವುದು ವಿಶೇಷ. ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರುತ್ತಿದೆ.
‘ಬಾಯ್ಸ್’, ‘ನುವಸ್ತಾನಂಟೆ ನೆನೊದ್ದಂಟಾನ’, ‘ರಂಗ್ ದೇ ಬಸಂತಿ’, ‘ಯುವಾ’, ‘ಬೊಮ್ಮರಿಲ್ಲು’, ‘ಓಯ್’, ‘ಕೊಂಚಂ ಇಷ್ಟಂ ಕೊಂಚಂ ಕಷ್ಟಂ’, ‘ಮಿಡ್ನೈಟ್ಸ್ ಚಿಲ್ಡ್ರನ್ಸ್’, ‘ಉದಯಂ ಎನ್ಎಚ್ 4’, ‘ಜಿಗರ್ಥಂಡ’, ‘ಚುಕ್ಕಲ್ಲೊ ಚಂದ್ರುಡು’ ‘180’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ಚಿಕ್ಕು’ ಸಿನಿಮಾ ಸಿದ್ಧಾರ್ಥ್ರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಆದರೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಿದ್ಧಾರ್ಥ್ ಮೊದಲಿನಿಂದಲೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ