ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟ ಮಹೇಶ್ ಬಾಬು: ಏನಿದು ಕತೆ?
Mahesh Babu: ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬು ತೆಲುಗು ಸಿನಿಮಾಗಳ ಹೊರತಾಗಿ ಇನ್ಯಾವುದೇ ಭಾಷೆಯ ಸಿನಿಮಾಗಳಲ್ಲಿ ನಟಿಸಿಲ್ಲ. ಅವರೇ ಹೇಳಿರುವಂತೆ ಬಾಲಿವುಡ್ನಿಂದ ಹಲವು ಅವಕಾಶಗಳು ಬಂದಿವೆಯಾದರೂ ಈವರೆಗೆ ಅವರು ಬೇರೆ ಚಿತ್ರರಂಗಕ್ಕೆ ಹೋಗಿಲ್ಲ. ಆದರೆ ಈಗ ಮಹೇಶ್ ಬಾಬು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ!
ಮಹೇಶ್ ಬಾಬು (Mahesh Babu) ಟಾಲಿವುಡ್ನ (Tollywood) ದೊಡ್ಡ ಸ್ಟಾರ್ ನಟರಲ್ಲಿ ಒಬ್ಬರು. ಬಾಲಿವುಡ್ನಿಂದ ಹಲವು ಆಫರ್ಗಳು ಮಹೇಶ್ ಬಾಬುಗೆ ಬಂದಿದ್ದವು, ಆದರೆ ಅವರು ಮಾತ್ರ ತೆಲುಗು ಚಿತ್ರರಂಗದಲ್ಲಿಯೇ ಉಳಿದಿದ್ದಾರೆ. ಇದೀಗ ರಾಜಮೌಳಿ ನಿರ್ದೇಶನದ ಸಿನಿಮಾಕ್ಕಾಗಿ ರೆಡಿಯಾಗುತ್ತಿರುವ ಮಹೇಶ್ ಬಾಬು ಹಠಾತ್ತನೆ ಗಾಂಧಿ ನಗರಕ್ಕೆ ಎಂಟ್ರಿ ನೀಡಿದ್ದಾರೆ. ಸುದ್ದಿ ತುಸು ಆಶ್ಚರ್ಯಕ್ಕೆ ಕಾರಣವಾಗಬಹುದು ಆದರೆ ಮಹೇಶ್ ಬಾಬು ಗಾಂಧಿ ನಗರಕ್ಕೆ ಎಂಟ್ರಿ ಕೊಡುತ್ತಿರುವುದಂತೂ ಸತ್ಯ. ಆದರೆ ಸಿನಿಮಾ ನಟನಾಗಿಯೋ, ನಿರ್ಮಾಪಕನಾಗಿಯೋ ಅಲ್ಲ. ಬದಲಿಗೆ ಪ್ರದರ್ಶಕರಾಗಿ.
ಬೆಂಗಳೂರಿನ ಗಾಂಧಿ ನಗರ ಏರಿಯಾದಲ್ಲಿ ಮಹೇಶ್ ಬಾಬು ದೊಡ್ಡ ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಹಿಂದೆ ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ದೊಡ್ಡದಾಗಿ ತಮ್ಮ ಮಲ್ಟಿಪ್ಲೆಕ್ಸ್ ಅನ್ನು ಮಹೇಶ್ ಬಾಬು ಪ್ರಾರಂಭ ಮಾಡುತ್ತಿದ್ದಾರೆ. ಈಗಾಗಲೇ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕೆಲವೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.
ಮಹೇಶ್ ಬಾಬು ಎಎಂಬಿ ಹೆಸರಿನ ಮಲ್ಟಿಪ್ಲೆಕ್ಸ್ ಚೈನ್ನ ಮಾಲೀಕರಾಗಿದ್ದಾರೆ. ಹೈದರಾಬಾದ್ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಮಹೇಶ್ ಬಾಬು ಒಡೆತನದ ಎಎಂಬಿ ಮಲ್ಟಿಪ್ಲೆಕ್ಸ್ ಚೈನ್ ಸಿನಿ ಪ್ರಿಯರಿಗೆ ಸೇವೆ ಸಲ್ಲಿಸುತ್ತಿದೆ. ಹೈದರಾಬಾದ್, ಚೆನ್ನೈ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚು ಭಿನ್ನ ಅಭಿರುಚಿಯ ಸಿನಿಮಾ ಪ್ರಿಯರಿದ್ದು, ಇದೀಗ ಅಂಥಹವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ತೆರೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ:ಜವಾನ್ ಸಿನಿಮಾ ನೋಡಿದ ಮಹೇಶ್ ಬಾಬು-ರಾಜಮೌಳಿ ಹೇಳಿದ್ದು ಹೀಗೆ
ಬೆಂಗಳೂರಿನ ಹೆಮ್ಮೆಯ ಚಿತ್ರಮಂದಿರವಾಗಿದ್ದ ಕಪಾಲಿ ಇದ್ದ ಜಾಗದಲ್ಲಿಯೇ ಎಎಂಬಿ ಮಲ್ಟಿಪ್ಲೆಕ್ಸ್ ಆರಂಭವಾಗುತ್ತಿದೆ. 49 ವರ್ಷಗಳ ಕಾಲ ಸಿನಿಪ್ರಿಯರಿಗೆ ಮನರಂಜನೆ ಒದಗಿಸಿದ್ದ ಕಪಾಲಿ ಚಿತ್ರಮಂದಿರ ಕೆಲ ವರ್ಷಗಳ ಹಿಂದೆ ಕಾರ್ಯ ನಿಲ್ಲಿಸಿದೆ. ಡಾ ರಾಜ್ಕುಮಾರ್ ಅವರ ಹಲವಾರು ಸಿನಿಮಾಗಳು ಸೇರಿದಂತೆ ಇಂಗ್ಲೀಷ್, ತಮಿಳು, ತೆಲುಗು ಸಿನಿಮಾಗಳು ಸಹ ಈ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿವೆ. ಶಿವರಾಜ್ ಕುಮಾರ್ ನಟಿಸಿ, ಉಪೇಂದ್ರ ನಿರ್ದೇಶನ ಮಾಡಿರುವ ‘ಓಂ’ ಸಿನಿಮಾ ಈ ಚಿತ್ರಮಂದಿರದಲ್ಲಿ 30 ಬಾರಿ ಮರುಬಿಡುಗಡೆ ಆಗಿ ಸೂಪರ್ ಹಿಟ್ ಆಗಿರುವುದು ದಾಖಲೆ.
ಇದೇ ಜಾಗದಲ್ಲಿ ಈಗ ಎಎಂಬಿ ಮಲ್ಟಿಪ್ಲೆಕ್ಸ್ ತಲೆ ಎತ್ತುತ್ತಿದೆ. ಸುಮಾರು 5-6 ಸ್ಕ್ರೀನ್ಗಳು ಮಲ್ಟಿಪ್ಲೆಕ್ಸ್ನ ಒಳಗೆ ಇರಲಿವೆ. ಒಂದು ಗೋಲ್ಡ್ ಕ್ಲಾಸ್ ಸಹ ಮಲ್ಟಿಪ್ಲೆಕ್ಸ್ನಲ್ಲಿ ಇರಲಿದೆ ಎನ್ನಲಾಗುತ್ತಿದೆ. ಕಟ್ಟಡದ ನಿರ್ಮಾಣ ಚಾಲ್ತಿಯಲ್ಲಿದ್ದು ಮುಂದಿನ ವರ್ಷಾರಂಭದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ