ಹಿರಿಯ ರಾಜಕಾರಣಿ, ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಮುಖ್ಯಮಂತ್ರಿ ಅವಧಿ ಎಲ್ಲರಿಗೂ ನೆನಪಿನಲ್ಲಿ ಇರುವಂಥದ್ದು. ಅದಕ್ಕೆ ಕಾರಣ ಅವರು ಎದುರಿಸಿದ ಚಾಲೆಂಜ್. ವರನಟ ಡಾ. ರಾಜ್ಕುಮಾರ್ ಅವರು ಅಪಹರಣ ಆಗಿದ್ದು ಕೃಷ್ಣ ಅವರ ಅಧಿಕಾರ ಅವಧಿಯಲ್ಲೇ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರು ವರ್ಷವೇ ವೀರಪ್ಪನ್ ಕಡೆಯಿಂದ ಅಣ್ಣಾವ್ರು ಕಿಡ್ನ್ಯಾಪ್ ಆದರು. ವೀರಪ್ಪನ್ 108 ದಿನಗಳ ಕಾಲ ಅಣ್ಣಾವ್ರನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ. ಆ ದಿನಗಳ ಬಗ್ಗೆ ಈಗಲೂ ಚರ್ಚೆಗಳು ಆಗುತ್ತವೆ. ರಾಜ್ಕುಮಾರ್ ಅವರಿಗೂ ಕರ್ನಾಟಕ ಸರ್ಕಾರಕ್ಕೂ ಒಂದು ಒಪ್ಪಂದ ಆಗಿತ್ತು. ಆದರೆ, ಇದನ್ನು ಅಣ್ಣಾವ್ರು ಮೀರಿದಾಗ ಎಡವಟ್ಟು ಸಂಭವಿಸಿತ್ತು.
ಎಸ್ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಿಧನ ಹೊಂದಿದರು. ಅವರಿಗೆ ವಯೋಸಹಜ ಕಾಯಿಲೆ ಇತ್ತು. ಈ ಸಂದರ್ಭದಲ್ಲಿ ಅವರ ಅಧಿಕಾರದ ಅವಧಿಯನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈ ಮೊದಲು ಕೃಷ್ಣ ಅವರು ರಾಜ್ಕುಮಾರ್ ಅಪಹರಣದ ಬಗ್ಗೆ ಮಾತನಾಡಿದ್ದರು. ರಾಜ್ಕುಮಾರ್ಗೆ ಕೊಟ್ಟ ಎಚ್ಚರಿಕೆ ಬಗ್ಗೆಯೂ ಅವರು ಹೇಳಿಕೊಂಡಿದ್ದರು.
ರಾಜ್ಕುಮಾರ್ ಅವರಿಗೆ ವೀರಪ್ಪನ್ ಕಡೆಯಿಂದ ತೊಂದರೆ ಇದೆ ಎಂಬ ಸೂಚನೆ ರಾಜ್ಯ ಸರ್ಕಾರಕ್ಕೆ ಮೊದಲೇ ಇತ್ತು. ಈ ಕಾರಣದಿಂದಲೇ ರಾಜ್ಕುಮಾರ್ ಜೊತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಗಾಜನೂರಿನ ಭಾಗಕ್ಕೆ ತೆರಳೋದಾದರೆ ರಾಜ್ಯ ಸರ್ಕಾರಕ್ಕೆ ಮೊದಲೇ ತಿಳಿಸಬೇಕು ಎಂದು ಹೇಳಿತ್ತು. ಇದಕ್ಕೆ ರಾಜ್ಕುಮಾರ್ ಕೂಡ ಒಪ್ಪಿದ್ದರು.
ಇದನ್ನೂ ಓದಿ: ರಾಜ್ಕುಮಾರ್ ಅಪಹರಣವಾದಾಗ ಸಿಎಂ ಆಗಿದ್ದ ಎಸ್ಎಂ ಕೃಷ್ಣ; 108 ದಿನವೂ ಸರಿಯಾಗಿ ನಿದ್ದೆ ಮಾಡದೆ ಒದ್ದಾಡಿದ್ದ ರಾಜಕಾರಣಿ
ಪ್ರತಿ ಬಾರಿಯೂ ಗಾಜನೂರಿಗೆ ತೆರಳುವಾಗ ರಾಜ್ಕುಮಾರ್ ಅವರು ಸರ್ಕಾರಕ್ಕೆ ತಿಳಿಸುತ್ತಿದ್ದರು. ಆಗ ಅಣ್ಣಾವ್ರಿಗೆ ಸೂಕ್ತ ಪೊಲೀಸ್ ಬಧ್ರತೆಯನ್ನು ಸರ್ಕಾರ ಒದಗಿಸುತ್ತಿತ್ತು. ಆದರೆ, ಅಂದು ಮಾತ್ರ ಅವರು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ನೇರವಾಗಿ ಗಾಜನೂರಿಗೆ ತೆರಳಿದರು. ಈ ವೇಳೆ ವೀರಪ್ಪನ್ ಕಡೆಯವರು ಬಂದು ರಾಜ್ಕುಮಾರ್ನ ಕರೆದುಕೊಂಡು ಹೋದರು. ಇದು ಸರ್ಕಾರಕ್ಕೆ ಹಾಗೂ ಅಣ್ಣಾವ್ರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಥಿಯೇಟರ್ಗಳು ಮುಚ್ಚಿದ್ದವು. 108 ದಿನಗಳ ಬಳಿಕ ಅವರನ್ನು ಮರಳಿ ಕರೆ ತರಲಾಯಿತು. ಈ ವೇಳೆ ಕೃಷ್ಣ ಅವರು ಸಾಕಷ್ಟು ಶ್ರಮ ಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.