ಡಿಸೆಂಬರ್ 11ರಂದು ದರ್ಶನ್ಗೆ ಶಸ್ತ್ರಚಿಕಿತ್ಸೆ; ಇಲ್ಲಿದೆ ಸರ್ಜರಿಯ ಸಂಪೂರ್ಣ ವಿವರ
ತೀವ್ರ ಬೆನ್ನು ನೋವು ಇರುವುದರಿಂದ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದರು. ಹಾಗಾಗಿ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಈಗ ಸರ್ಜರಿ ಕಾರಣಕ್ಕೆ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ. ಡಿ.11ರಂದು ದರ್ಶನ್ ಅವರಿಗೆ ವೈದ್ಯರು ಲುಂಬರ್ ಡಿಕಂಪ್ರೆಷನ್ ಅಂಡ್ ಫ್ಯೂಷನ್ ಸರ್ಜರಿ ಮಾಡಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಡಿಸೆಂಬರ್ 11ರಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಬಗ್ಗೆ ಹೈಕೋರ್ಟ್ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ದರ್ಶನ್ಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರಗಳನ್ನು ಕೂಡ ಕೋರ್ಟ್ಗೆ ನೀಡಲಾಗಿದೆ. ದರ್ಶನ್ ಪರ ವಕೀಲರು 5 ಸರ್ಟಿಫಿಕೆಟ್ಗಳನ್ನ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಡಿಸೆಂಬರ್ 2ರ ವೈದ್ಯರ ವರದಿಯಲ್ಲಿ ಸರ್ಜರಿಯ ವಿವರ ಉಲ್ಲೇಖ ಮಾಡಲಾಗಿದೆ. ಲುಂಬರ್ ಡಿಕಂಪ್ರೆಷನ್ ಅಂಡ್ ಫ್ಯೂಷನ್ ಎಂಬ ಸರ್ಜರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಲುಂಬರ್ ಡಿಕಂಪ್ರೆಷನ್ ಅಂಡ್ ಫ್ಯೂಷನ್ ಸರ್ಜರಿಯಿಂದ ಬೆನ್ನುಹುರಿ ಚಟುವಟಿಕೆ ಸಹಜಗೊಳಿಸಬಹುದು. ಇದರಿಂದ ದರ್ಶನ್ ಅವರ ಬೆನ್ನುಹುರಿ ನೋವು ಕಡಿಮೆ ಮಾಡಬಹುದು. ಜೀವನದ ಗುಣಮಟ್ಟ ಹೆಚ್ಚಿಸಬಹುದೆಂದು ವೈದ್ಯರ ವರದಿಯಲ್ಲಿ ಹೇಳಲಾಗಿದೆ. ಈ ಸರ್ಜರಿಯ ಬಗ್ಗೆ ಈಗಾಗಲೇ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಗೆ ಮನವರಿಕೆ ಮಾಡಲಾಗಿದೆ.
ದರ್ಶನ್ ಅವರಿಗೆ ಜನರಲ್ ಅನಸ್ತೇಶಿಯಾ ಕೊಟ್ಟು ಸರ್ಜರಿ ಮಾಡಲಾಗುವುದು. ಈ ಬಗ್ಗೆ ನ್ಯೂರೋ ಸರ್ಜನ್ ವಿಭಾಗದ ಮುಖ್ಯಸ್ಥ ನವೀನ್ ಅವರಿಂದ ವರದಿ ನೀಡಲಾಗಿದೆ. ಮುಖ್ಯ ಆಡಳಿತಾಧಿಕಾರಿ ಸ್ಮಿತಾ ತಮ್ಮಯ್ಯ ಅವರು ಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ. ಸದ್ಯಕ್ಕೆ ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಆಗಿದೆ. ಚಿಕಿತ್ಸೆಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಎದೆಗೂಡಿನ 17 ಮೂಳೆ ಮುರಿದಿವೆ; ಕೊಲೆ ಎನ್ನಲು ಹಲವು ಸಾಕ್ಷ್ಯಗಳಿವೆ: ಎಸ್ಪಿಪಿ ವಾದ
ಹಲವು ವರ್ಷಗಳಿಂದ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ‘ಕಾಟೇರ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೂಡ ಅವರಿಗೆ ನೋವು ಕಾಣಿಸಿಕೊಂಡಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 2ನೇ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದು, ಬಳಿಕ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಆಗ ಅವರಿಗೆ ಬೆನ್ನುನೋವು ಹೆಚ್ಚಾಯಿತು.
ದರ್ಶನ್ ಅವರಿಗೆ ಬೆನ್ನು ನೋವು ಹೆಚ್ಚಾದ ಕಾರಣ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು. ಡಿಸೆಂಬರ್ 11ಕ್ಕೆ ಅವರ ಜಾಮೀನು ಅವಧಿ ಅಂತ್ಯ ಆಗುವುದರಲ್ಲಿತ್ತು. ಆದರೆ ಅವರ ಪರ ವಕೀಲರು ಜಾಮೀನು ಅವಧಿ ವಿಸ್ತರಿಸಲು ಮನವಿ ಮಾಡಿದ್ದರು. ಮುಂದಿನ ಆದೇಶದ ತನಕ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.