ನಟ ಸೋನು ಸೂದ್ (Sonu Sood) ಅವರು ಸಾಮಾಜಿಕ ಕೆಲಸಗಳ ಮೂಲಕ ಗಮನ ಸೆಳೆದಿದ್ದಾರೆ. 2020ರಲ್ಲಿ ಕೊವಿಡ್ ಕಾಣಿಸಿಕೊಂಡಾಗ ಅವರು ಸಹಾಯಕ್ಕೆ ನಿಂತರು. ಅನೇಕ ರೀತಿಯಲ್ಲಿ ಅವರು ಜನರಿಗೆ ಸಹಾಯ ಮಾಡಿದರು. ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆಗಿದ್ದ ಸೋನು ಸೂದ್ ಅವರು, ರಿಯಲ್ ಲೈಫ್ನಲ್ಲಿ ನಿಜವಾದ ಹೀರೋ ಎನಿಸಿಕೊಂಡರು. ಈಗಲೂ ಸೋನು ಸೂದ್ ಅವರು ತಮ್ಮ ಒಳ್ಳೆಯ ಕೆಲಸವನ್ನು ಮುಂದುವರಿಸಿದ್ದಾರೆ. ಈಗ ಸೋನು ಸೂದ್ ಅವರು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿಗೆ ಸಹಾಯ ಮಾಡಿದ್ದಾರೆ.
ವ್ಯಕ್ತಿಯೋರ್ವ ದುಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಆ ವ್ಯಕ್ತಿಗೆ ಏಕಾಏಕಿ ಹೃದಯಾಘಾತ ಉಂಟಾಗಿದೆ. ಉಸಿರಾಟಕ್ಕೆ ಅಡಚಣೆ ಉಂಟಾಗಿದೆ. ಆಗ ಸೋನು ಸೂದ್ ಅಲ್ಲಿಯೇ ಇದ್ದರು. ಅವರು ಆ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಕೆಲಸ ಮಾಡಿದ್ದಾರೆ. ನಂತರ ಆರೋಗ್ಯ ಸಿಬ್ಬಂದಿ ಬಂದು ಅವರಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜೀವವನ್ನು ಕಾಪಾಡಿದ್ದಕ್ಕೆ ಆ ವ್ಯಕ್ತಿ ಧನ್ಯವಾದ ತಿಳಿಸಿದ್ದಾರೆ. ಈ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಸೋನು ಸೂದ್ ಅವರು ನಡೆದುಕೊಂಡ ರೀತಿಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೋನು ಸೂದ್ ಈ ರೀತಿಯ ಕೆಲಸವನ್ನು ಮುಂದುವರಿಸಲಿ ಎಂದು ಎಲ್ಲರೂ ಹಾರೈಸಿದ್ದಾರೆ.
ಸೋನು ಸೂದ್ ಅವರು ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. 2020ರಿಂದ ಈಚೆಗೆ ವಿಲನ್ ಆಗಿ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಜನರು ನಿಜವಾದ ಹೀರೋ ಆಗಿ ತಮ್ಮನ್ನು ನೋಡುತ್ತಿರುವಾಗ ವಿಲನ್ ಪಾತ್ರ ಮಾಡುವುದು ಸರಿ ಅಲ್ಲ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: Sonu Sood: ರೈಲ್ವೆ ಅಧಿಕಾರಿಗಳ ಬಳಿ ಕ್ಷಮೆ ಕೇಳಿದ ಸೋನು ಸೂದ್; ನಟ ಮಾಡಿದ ತಪ್ಪೇನು?
2022ರಲ್ಲಿ ‘ಆಚಾರ್ಯ’ ಹಾಗೂ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಗಳಲ್ಲಿ ಸೋನು ಸೂದ್ ಕಾಣಿಸಿಕೊಂಡರು. ಅವರು ಈಗ ಮೊದಲಿನಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರನ್ನು ಹೀರೋ ಆಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ