ಇನ್ನು 6 ತಿಂಗಳು ಯಾರ ಕಣ್ಣಿಗೂ ಕಾಣಿಸಲ್ಲ ಪ್ರಭಾಸ್: ಕಾರಣ ಏನು?

ಮುಂದಿನ ಕೆಲವು ತಿಂಗಳ ಕಾಲ ಪ್ರಭಾಸ್ ಯಾರ ಕಣ್ಣಿಗೂ ಕಾಣಿಸಿಕೊಳ್ಳಲ್ಲ ಎಂಬುದು ಫ್ಯಾನ್ಸ್ ಪಾಲಿಗೆ ಬೇಸರದ ವಿಷಯ. ಆದರೆ ಪ್ರಭಾಸ್ ಅವರು ಈ ರೀತಿ ಮಾಡುತ್ತಿರುವುದು ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಕಾರಣಕ್ಕಾಗಿ ಮಾತ್ರ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಸೂಚನೆ ಮೇರೆಗೆ ಪ್ರಭಾಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು 6 ತಿಂಗಳು ಯಾರ ಕಣ್ಣಿಗೂ ಕಾಣಿಸಲ್ಲ ಪ್ರಭಾಸ್: ಕಾರಣ ಏನು?
Prabhas

Updated on: Nov 30, 2025 | 7:16 AM

ನಟ ಪ್ರಭಾಸ್ ಅವರು ‘ಸ್ಪಿರಿಟ್’ (Spirit) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ, ಅವರು ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅವರನ್ನು ನೇರವಾಗಿ ನೋಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಯಾವುದಾದರೂ ಸಮಾರಂಭ ಅಥವಾ ಏರ್​ಪೋರ್ಟ್ ಮುಂತಾದ ಕಡೆಗಳಲ್ಲಿ ಪ್ರಭಾಸ್ ಕಾಣಿಸಿಕೊಂಡರೆ ಅಭಿಮಾನಿಗಳು ಖುಷಿ ಆಗುತ್ತಾರೆ. ಆದರೆ ಮುಂದಿನ ಕೆಲವು ತಿಂಗಳ ಕಾಲ ಪ್ರಭಾಸ್ (Prabhas) ಅವರು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ ‘ಸ್ಪಿರಿಟ್’ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ!

‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳಿಂದ ಭರ್ಜರಿ ಯಶಸ್ಸು ಕಂಡಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಈಗ ಪ್ರಭಾಸ್ ಜೊತೆ ಸ್ಪಿರಿಟ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇತ್ತೀಚೆಗಷ್ಟೇ ಮುಹೂರ್ತ ಮಾಡಲಾಯಿತು. ಅಲ್ಲದೇ ಶೂಟಿಂಗ್ ಕೂಡ ಆರಂಭಿಸಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರ ಗೆಟಪ್ ಡಿಫರೆಂಟ್ ಆಗಿರಲಿದೆ. ಆ ಲುಕ್ ಗೌಪ್ಯವಾಗಿಯೇ ಇರಬೇಕು ಎಂಬುದು ಸಂದೀಪ್ ರೆಡ್ಡಿ ವಂಗ ಅವರು ಉದ್ದೇಶ.

ಒಂದು ವೇಳೆ ಪ್ರಭಾಸ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಭಿಮಾನಿಗಳು, ಪಾಪರಾಜಿಗಳು ಖಂಡಿತವಾಗಿಯೂ ಫೋಟೋ ಕ್ಲಿಕ್ಕಿಸುತ್ತಾರೆ. ಆಗ ‘ಸ್ಪಿರಿಟ್’ ಸಿನಿಮಾದಲ್ಲಿನ ಅವರ ಲುಕ್ ಬಹಿರಂಗ ಆಗುತ್ತದೆ. ಆ ರೀತಿ ಆಗದಿರುವಂತೆ ನೋಡಿಕೊಳ್ಳಲು ಮುಂದಿನ 6 ತಿಂಗಳ ಕಾಲ ಪ್ರಭಾಸ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬೇಡ ಎಂದು ಸಂದೀಪ್ ರೆಡ್ಡಿ ವಂಗ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ಅವರು ಮುಂದಿನ ಕೆಲವು ತಿಂಗಳ ಕಾಲ ಯಾರ ಕಣ್ಣಿಗೂ ಕಾಣಿಸಿಕೊಳ್ಳಲ್ಲ ಎಂಬುದು ಅಭಿಮಾನಿಗಳ ಪಾಲಿಗೆ ಬೇಸರ ಉಂಟುಮಾಡುವ ವಿಷಯವೇ ಹೌದು. ಆದರೆ ಅದರಿಂದ ‘ಸ್ಪಿರಿಟ್’ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿ ಆಗುವುದಂತೂ ನಿಜ. ಈ ಚಿತ್ರದಲ್ಲಿ ಪ್ರಭಾಸ್ ಅವರ ಲುಕ್ ಯಾವ ರೀತಿ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ‘ಸ್ಪಿರಿಟ್’ ಸಿನಿಮಾನಲ್ಲಿ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ

ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗ ಅವರ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಸ್ಪಿರಿಟ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಈ ಸಿನಿಮಾದಲ್ಲಿ ಬಾಲಿವುಡ್​ನ ಕಲಾವಿದರು ಕೂಡ ಅಭಿನಯಿಸುತ್ತಿದ್ದಾರೆ. ತೃಪ್ತಿ ದಿಮ್ರಿ, ವಿವೇಕ್ ಒಬೆರಾಯ್ ಮುಂತಾದವರು ಪ್ರಭಾಸ್ ಜೊತೆ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.