
ಕನ್ನಡದ ನಟಿ ಶ್ರೀಲೀಲಾ ಈಗ ಪರ ಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬಲು ಬೇಗನೆ ಟಾಪ್ ನಟಿಯಾಗಿ ಮೆರೆದ ಶ್ರೀಲೀಲಾ ಈಗ ತಮಿಳು ಚಿತ್ರರಂಗದಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮಿಳಿನಲ್ಲಿ ಇದೀಗ ‘ಓಂ’ ಸಿನಿಮಾನಲ್ಲಿ ಶ್ರೀಲೀಲಾ ನಟನೆ ಮಾಡಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೆ ಹೈದರಾಬಾದ್ನಲ್ಲಿ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರೀಲೀಲಾ, ತಮ್ಮ ವೃತ್ತಿ ಜೀವನದಲ್ಲಿ ತಾವು ಮಾಡಿದ ಕೆಲ ತಪ್ಪು ಆಯ್ಕೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಸಿನಿಮಾ ಪ್ರಯಾಣದ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಶ್ರೀಲೀಲಾ, ‘ಮುಂಬೈನಲ್ಲಿ ಮೆಡಿಕಲ್ ಇಂಟರ್ನ್ಶಿಪ್ ಮಾಡುತ್ತಿದ್ದ ಕಾಲದಲ್ಲೇ ತನಗೆ ಸಾಕಷ್ಟು ಸಿನಿಮಾಗಳ ಆಫರ್ಗಳು ಬಂದಿದ್ದವು. ಆದರೆ ವಿದ್ಯಾಭ್ಯಾಸದ ಕಾರಣದಿಂದ ಆ ಸಂದರ್ಭದಲ್ಲಿ ಆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದರು.
ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಕಾರಣ ನನಗೆ ಆಯ್ಕೆ ಮಾಡುವ ಶಕ್ತಿ ಇರಲಿಲ್ಲ, ಬಂದ ಪ್ರತಿಯೊಂದು ಅವಕಾಶವನ್ನೂ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡೆ ಆದರೂ ನೀವೆಲ್ಲ ಸಾಕಷ್ಟು ಪ್ರೀತಿ ತೋರಿಸಿದಿರಿ. ಒಂದು ಹಂತದಲ್ಲಿ ನಾನು ಮಾಡುತ್ತಿದ್ದ ಸಿನಿಮಾಗಳ ಆಯ್ಕೆಯ ಬಗ್ಗೆ ನನ್ನಲ್ಲೇ ಹಲವು ಸಂದೇಹಗಳು ಮೂಡಿದವು. ನನಗೆ ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ, ಹಿಂದೆ ನಾನು ಮಾಡಿದ ಚಿತ್ರಗಳ ಬಗ್ಗೆ ಕೂಲಂಕಷವಾಗಿ ಆಲೋಚಿಸುತ್ತಿದ್ದೆ. ಆಗೆಲ್ಲ ನಾನು ಮಾಡಿದ ತಪ್ಪುಗಳು ನನಗೆ ಸ್ಪಷ್ಟವಾಗಿ ಕಾಣುತ್ತಿದ್ದವು’ ಎಂದರು ಶ್ರೀಲೀಲಾ.
ಇದನ್ನೂ ಓದಿ:‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ; ರಜನಿಕಾಂತ್ ಜೊತೆ ನಟಿಸುವ ಅವಕಾಶ
‘ನಾನು ‘ಓಂ’ ಸಿನಿಮಾದ ನಿರ್ದೇಶಕ ರಾಜಕುಮಾರಿ ಪೆರ್ರಿಸ್ವಾಮಿ ಅವರಿಗೆ ಧನ್ಯವಾದ ಹೇಳಬೇಕು. ನಾನು ಯೋಚಿಸುವ ವಿಧಾನ ಬದಲಾಯಿಸಿದ್ದೇ ಅವರು. ‘ನೀನು ಯಾವಾಗ ಆಯ್ಕೆ ಮಾಡಲು ಆರಂಭಿಸುತ್ತೀಯೋ ಆಗಲೇ ನಿನ್ನ ಜೀವನ ಬದಲಾಗುತ್ತದೆ’ ಎಂದರು. ಅವರ ಮಾತಿನಂತೆ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುವ ಬದಲು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದೆ. ಅದರ ಭಾಗವಾಗಿಯೇ ನಾನು ‘ಓಂ’ ಸಿನಿಮಾನಲ್ಲಿ ನಟನೆ ಮಾಡಿದ್ದೇನೆ’ ಎಂದರು.
‘ನಾನು ಸಿನಿಮಾಗಳಿಂದ ಬ್ರೇಕ್ ಪಡೆದು ಮೆಡಿಕಲ್ ಕಾಲೇಜಿನ ಇಂಟರ್ನ್ಶಿಪ್ ಮಾಡುವಾಗ ನನಗೆ ಈ ಸಿನಿಮಾದ ಕತೆ ಹೇಳಲಾಗಿತ್ತು. ಆಗ ನನಗೆ ಗೊಂದಲಗಳಿದ್ದವು. ಆದರೆ ನಿರ್ದೇಶಕರೊಟ್ಟಿಗೆ ಮಾತನಾಡಿದ ಬಳಿಕ ನನಗೆ ಎಲ್ಲವೂ ಸ್ಪಷ್ಟವಾಯ್ತು’ ಎಂದ ಶ್ರೀಲೀಲಾ, ‘ಈ ಕಥೆಯನ್ನು ನನಗೆ ಮೊದಲಿಗೆ ವಿವರಿಸಿದಾಗಲೇ, ಇದರಲ್ಲಿ ಯಾವುದೇ ಕಮರ್ಶೀಯಲ್ ಹಾಡುಗಳು ಇರುವುದಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದರು. ಅದು ನನಗೆ ತುಸು ಹೊಸದು ಅನಿಸಿತು, ಏಕೆಂದರೆ ನನ್ನಿಂದ ಸಿನಿಮಾಕ್ಕೆ ಕೊಡುವುದೇ ಹಾಡು ಮತ್ತು ಡ್ಯಾನ್ಸ್ ಎಂದು ನಾನು ಅಂದುಕೊಂಡಿದ್ದೆ. ಅವರು ಅದನ್ನು ಬದಲಾಯಿಸಿದರು. ಅದಕ್ಕಾಗಿ ಅವರಿಗೆ ಧನ್ಯವಾದ’ ಎಂದರು ಶ್ರೀಲೀಲಾ.
ಶ್ರೀಲೀಲಾ ಈ ವರೆಗೆ ಕೇವಲ ‘ಗ್ಲಾಮರಸ್-ಬಬ್ಲಿ’ ಪಾತ್ರಗಳಲ್ಲಿ ಮಾತ್ರವೇ ನಟಿಸಿದ್ದರು. ನಟನೆಗೆ ಒತ್ತು ಇರುವ ಸಿನಿಮಾನಲ್ಲಿ ಶ್ರೀಲೀಲಾ ನಟಿಸಿದ್ದು ಬಹಳ ಕಡಿಮೆ. ಅವರನ್ನು ಕೇವಲ ಹಾಡು ಮತ್ತು ಡ್ಯಾನ್ಸ್ಗಾಗಿ ಮಾತ್ರವೇ ನಿರ್ದೇಶಕರು ಬಳಸಿಕೊಂಡಿದ್ದರು. ಆದರೆ ‘ಓಂ’ ಸಿನಿಮಾನಲ್ಲಿ ಅವರು ಗೃಹಿಣಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾದ ಮೂಲಕ ತಮ್ಮ ಸಿನಿಮಾಗಳ ಆಯ್ಕೆಯ ವಿಧಾನ ಬದಲಾಗಲಿದೆ ಎಂದು ಶ್ರೀಲೀಲಾ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ