‘ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’; ರಮ್ಯಾ ಕೃಷ್ಣ
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇರುವುದು ಸತ್ಯ ಮತ್ತು ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹಿರಿಯ ನಟಿ ರಮ್ಯಾ ಕೃಷ್ಣನ್ ಹೇಳಿದ್ದಾರೆ. ಕೇವಲ ಸಿನಿಮಾ ರಂಗ ಮಾತ್ರವಲ್ಲದೆ ಎಲ್ಲೆಡೆಯೂ ಲಿಂಗ ಭೇದವಿಲ್ಲದೆ ಇಂತಹ ಶೋಷಣೆಗಳು ನಡೆಯುತ್ತಿವೆ ಎಂದು ಅವರು ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕುರಿತ ಚರ್ಚೆಗಳು ಎಂದಿಗೂ ಮುಗಿಯದ ಅಧ್ಯಾಯ. ಕೆಲವರು ಇದು ಇದೆ ಎಂದು ಒಪ್ಪಿಕೊಂಡರೆ, ಇನ್ನೂ ಕೆಲವರು ಇಲ್ಲ ಎನ್ನುತ್ತಾರೆ. ಹೇಮಾ ಸಮಿತಿ ವರದಿಯ ನಂತರವೂ ಬಣ್ಣದ ಲೋಕದಲ್ಲಿ ಶೋಷಣೆ ನಿಂತಿಲ್ಲ ಎಂಬ ಮಾತುಗಲೂ ಇವೆ. ಇದೀಗ ಹಿರಿಯ ನಟಿ ರಮ್ಯಾ ಕೃಷ್ಣನ್ ಈ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇರುವುದು ಸತ್ಯ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ ಕೃಷ್ಣನ್, ಅಮೆರಿಕದ ಎಪ್‌ಸ್ಟೀನ್ ಫೈಲ್ಸ್ ಪ್ರಕರಣವನ್ನು ಉದಾಹರಣೆಯಾಗಿ ನೀಡಿದರು. ‘ಮಹಿಳೆಯರು ತುಂಬಾ ಮುಂದುವರಿದಿರುವ ಅಮೆರಿಕದಂತಹ ದೇಶದಲ್ಲೇ ಇಂತಹ ಘಟನೆಗಳು ನಡೆಯುತ್ತವೆ ಎಂದಾದರೆ ಭಾರತದಲ್ಲೂ ನಡೆಯುವುದರಲ್ಲಿ ಅಚ್ಚರಿಯಿಲ್ಲ. ಹಿಂದೆಯೂ ಇಂತಹ ಶೋಷಣೆಗಳು ನಡೆದಿವೆ. ಈಗಲೂ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತವೆ. ಆದರೆ ಬಲವಂತದಿಂದಲೋ ಅಥವಾ ಒಪ್ಪಿಗೆಯಿಂದಲೋ ಎಂಬುದು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಸಿನಿಮಾ ರಂಗಕ್ಕೆ ಹೆಚ್ಚಿನ ಪ್ರಚಾರ ಇರುವುದರಿಂದ ಇಲ್ಲಿನ ಘಟನೆಗಳು ಬೇಗನೆ ಸಾರ್ವಜನಿಕರ ಕಣ್ಣಿಗೆ ಬೀಳುತ್ತವೆ. ಆದರೆ ಕೇವಲ ಸಿನಿಮಾ ಆಯ್ಕೆ ವೇಳೆ ಮಾತ್ರ ಇಂತಹ ಘಟನೆಗಳು ನಡೆಯುತ್ತವೆ ಎಂದು ಕಾಸ್ಟಿಂಗ್ ಕೌಚ್ ಎಂಬ ಪದ ಬಳಸುವುದು ಸರಿಯಲ್ಲ. ಕುಟುಂಬ ಹಾಗೂ ಕೆಲಸದ ಸ್ಥಳಗಳಲ್ಲೂ ಮಹಿಳೆಯರು ಕಿರುಕುಳ ಎದುರಿಸುತ್ತಾರೆ. ಈ ಶೋಷಣೆ ಎಲ್ಲೆಡೆಯೂ ಇದೆ ಮತ್ತು ಇಲ್ಲಿ ಯಾವುದೇ ಲಿಂಗ ಭೇದವಿಲ್ಲ’ ಎಂದು ಅವರು ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾರೆ.
2017ರಲ್ಲಿ ಮಲಯಾಳಂ ಚಿತ್ರರಂಗದ ಮಹಿಳೆಯರ ಸಮಸ್ಯೆಗಳ ಅಧ್ಯಯನಕ್ಕೆ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ರಚಿಸಲಾಗಿತ್ತು. 2024ರ ಆಗಸ್ಟ್‌ನಲ್ಲಿ ಈ ವರದಿ ಬಹಿರಂಗಗೊಂಡು ಇಡೀ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಮತ್ತು ತಾರತಮ್ಯವನ್ನು ಆ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.
ಇದನ್ನೂ ಓದಿ: ಪತಿ ಕೃಷ್ಣ ವಂಶಿ ಜೊತೆಗಿನ ವಿಚ್ಛೇದನ ವದಂತಿಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ
ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ ರಮ್ಯಾ ಕೃಷ್ಣನ್ ಇತ್ತೀಚೆಗೆ ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅವರು ವಿಜಯಾ ಪಾತ್ರಕ್ಕೆ ಮತ್ತೆ ಬಣ್ಣ ಹಚ್ಚಿದ್ದರು. ಸದ್ಯ ಕಾಸ್ಟಿಂಗ್ ಕೌಚ್ ಕುರಿತು ರಮ್ಯಾ ನೀಡಿರುವ ಈ ಬೋಲ್ಡ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




