ರಾಜಮೌಳಿಯಿಂದ ಭಾರತದ ಅಭಿವೃದ್ಧಿಯಾಗಲಿದೆ: ಅದು ಹೇಗೆ? ರಾಜಮೌಳಿಯೇ ವಿವರಿಸಿದ್ದಾರೆ
SS Rajamouli: ರಾಜಮೌಳಿಯಿಂದ ಭಾರತೀಯ ಸಿನಿಮಾಗಳಿಗೆ ವಿಶ್ವಮಟ್ಟದಲ್ಲಿ ಜನಪ್ರಿಯತೆ ದೊರಕಿದೆ ಸರಿ, ಆದರೆ ರಾಜಮೌಳಿಯಿಂದ ಭಾರತದ ಜಿಡಿಪಿ ಹೆಚ್ಚಲಿದೆಯೇ? ಅದು ಹೇಗೆ ಅವರೇ ವಿವರಿಸಿದ್ದಾರೆ.
ಭಾರತೀಯ ಸಿನಿಮಾಗಳಿಗೆ (Indian Cinema) ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುವಂತೆ ಮಾಡಿದ ಶ್ರೇಯ ರಾಜಮೌಳಿಗೆ (Rajamouli) ಸಲ್ಲುತ್ತದೆ. ಆರ್ಆರ್ಆರ್ ಸಿನಿಮಾಕ್ಕೆ ಮೊತ್ತ ಮೊದಲ ಆಸ್ಕರ ಬಂದ ಬೆನ್ನಲ್ಲೆ ಭಾರತೀಯ ಸಿನಿಮಾಗಳತ್ತ ನಿರೀಕ್ಷೆಯ ಕಣ್ಣುಗಳಿಂದ ವಿಶ್ವ ಸಿನಿಮಾ ಪ್ರೇಮಿಗಳು ನೋಡುತ್ತಿದ್ದಾರೆ. ಆರ್ಆರ್ಆರ್ ಆಸ್ಕರ್ ಗೆದ್ದ ಬಳಿಕ ಹಿಂದೆಂದೂ ಭಾರತೀಯ ಸಿನಿಮಾಗಳು ಬಿಡುಗಡೆ ಆಗಿರದ ದೇಶಗಳಲ್ಲಿಯೂ ಭಾರತದ ಸಿನಿಮಾಗಳು ಬಿಡುಗಡೆ ಆಗಲು ಶುರುವಾಗಿವೆ. ಆರ್ಆರ್ಆರ್ಗೆ (RRR) ಆಸ್ಕರ್ ಗೆದ್ದ ಬಳಿಕ ರಾಜಮೌಳಿ ಭಾರತಕ್ಕೆ ಮತ್ತೊಂದು ಆಸ್ಕರ್ ತೆಗೆದುಕೊಂಡು ಬಲ್ಲರು ಎಂಬ ನಿರೀಕ್ಷೆ ಜನರಲ್ಲಿ ಇತ್ತು, ಆದರೆ ರಾಜಮೌಳಿಯಿಂದ ಭಾರತಕ್ಕೆ ಆಸ್ಕರ್ ಬರುವುದು ಮಾತ್ರವಲ್ಲ ದೇಶದ ಅಭಿವೃದ್ಧಿಯೂ ಆಗಲಿದೆ ಎನ್ನಲಾಗುತ್ತಿದೆ. ಅದು ಹೇಗೆಂದು ಸ್ವತಃ ರಾಜಮೌಳಿಯೇ ವಿವರಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಾಜಮೌಳಿಗೆ ಆಸ್ಕರ್ಗೆ ಅಷ್ಟೇಕೆ ಪ್ರಾಮುಖ್ಯತೆ? ಆಸ್ಕರ್ ಗೆಲ್ಲುವುದು ಅಷ್ಟೋಂದು ಮುಖ್ಯವಾ? ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ರಾಜಮೌಳಿ, ‘ನಾನು ಪ್ರಶಸ್ತಿಗಾಗಿ ಸಿನಿಮಾ ಮಾಡುವುದಿಲ್ಲ, ಜನರ ಮೆಚ್ಚುಗೆ ಹಾಗೂ ಅದರಿಂದ ಬರುವ ಹಣಕ್ಕಾಗಿ ಮಾತ್ರವೇ ಸಿನಿಮಾ ಮಾಡುತ್ತೇನೆ. ಪ್ರಶಸ್ತಿ ಬಂದರೆ ಅದು ಬೋನಸ್ ಅಷ್ಟೆ. ಆದರೆ ಆಸ್ಕರ್ ಮಾದರಿಯ ಪ್ರಶಸ್ತಿ ಬರುವುದರಿಂದ ನಮ್ಮ ಸಿನಿಮಾಕ್ಕೆ ಮಾತ್ರವೇ ಒಳಿತಾಗುವುದಿಲ್ಲ. ಅದರ ಪರಿಣಾಮ ಸಿನಿಮಾ ರಂಗದ ಮೇಲೆ ಮಾತ್ರವೇ ಅಲ್ಲ ಬೇರೆ ಕ್ಷೇತ್ರದ ಮೇಲೂ ಆಗುತ್ತದೆ” ಎಂದರು ರಾಜಮೌಳಿ.
ಉದಾಹರಣೆಯಾಗಿ ಕೊರಿಯಾವನ್ನು ಹೆಸರಿದ ರಾಜಮೌಳಿ, ”ಹತ್ತು ವರ್ಷದ ಹಿಂದೆ ಕೊರಿಯಾ ಚಿತ್ರರಂಗ ಬಹಳ ಸಣ್ಣ ಚಿತ್ರರಂಗ. ಕೊರಿಯನ್ ಸಿನಿಮಾಕ್ಕೆ ಆಸ್ಕರ್ ಬಂದು, ಅವರ ಸಿನಿಮಾಗಳು ಒಟಿಟಿಗಳಲ್ಲಿ ಜನಪ್ರಿಯವಾಗುತ್ತಿದ್ದಂತೆ ಚಿತ್ರರಂಗದ ಗಾತ್ರ ಹತ್ತು ಪಟ್ಟು ದೊಡ್ಡದಾಯಿತು. ಅದು ಮಾತ್ರವೇ ಅಲ್ಲ, ಕೊರಿಯನ್ ಸಿನಿಮಾಗಳು ಜನಪ್ರಿಯವಾದಂತೆ ಕೊರಿಯನ್ ಫ್ಯಾಷನ್ ಉದ್ಯಮದ ಮೇಲೂ ಅದರ ಪರಿಣಾಮ ಬೀರಿತು. ಕೊರಿಯನ್ ಪ್ರವಾಸೋದ್ಯಮ ಹೆಚ್ಚಾಯಿತು, ಕೊರಿಯನ್ ಆಹಾರಕ್ಕೆ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಯಿತು. ಕೊರಿಯನ್ ಆಹಾರೋದ್ಯಮ 100 ಪಟ್ಟು ಹೆಚ್ಚಾಯಿತು. ಕೊರಿಯನ್ ಕಾಸ್ಮೆಟಿಕ್ಸ್ (ಪ್ರಸಾದನ) ಕ್ಷೇತ್ರ 200 ಪಟ್ಟು ದೊಡ್ಡದಾಯಿತು. ಕೊರಿಯನ್ ಸಂಗೀತ ಕೇಳುವವರು ಹೆಚ್ಚಾದರು. ಕೊರಿಯಾ ಬಗ್ಗೆ ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಸಿನಿಮಾದಿಂದ ಕೊರಿಯಾದ ಒಟ್ಟಾರೆ ಜಿಡಿಪಿ ಹೆಚ್ಚಾಯಿತು” ಎಂದಿದ್ದಾರೆ ರಾಜಮೌಳಿ.
ಭಾರತದ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವುದರಿಂದ, ವಿದೇಶಿ ಫಿಲಂ ಫೆಸ್ಟಿವಲ್ಗಳಾಗಲಿ, ವಿದೇಶಿ ಪ್ರಶಸ್ತಿ ಪಡೆದುಕೊಳ್ಳುವುದರಿಂದ ಭಾರತೀಯ ಚಿತ್ರರಂಗ ಬೆಳೆಯುತ್ತದೆ ಅದರ ಜೊತೆಗೆ ಭಾರತದ ಪ್ರವಾಸೋದ್ಯಮ, ಭಾರತದ ಆಹಾರ ಉದ್ಯಮ, ಭಾರತದ ಫ್ಯಾಷನ್ ಉದ್ಯಮ ಬಹಳ ದೊಡ್ಡಮಟ್ಟದಲ್ಲಿ ಬೆಳೆಯುತ್ತದೆ. ಭಾರತವು ಮಲ್ಟಿ ಬಿಲಿಯನ್ ಡಾಲರ್ ಮಾರುಕಟ್ಟೆಯಾಗಿ ಪರಿವರ್ತಿತವಾಗುತ್ತದೆ ಎಂದಿದ್ದಾರೆ ರಾಜಮೌಳಿ.
ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತೆಲುಗು ಸಿನಿಮಾ ನಿರ್ದೇಶಕ ತೇಜ ಸಹ ರಾಜಮೌಳಿ ಕುರಿತಾಗಿ ಇದೇ ಮಾತು ಹೇಳಿದ್ದರು. ರಾಜಮೌಳಿಯಿಂದಾಗಿ ಇನ್ನು ಹತ್ತು ವರ್ಷದಲ್ಲಿ ಭಾರತ ಅಭಿವೃದ್ಧಿ ಆಗಲಿದೆ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Wed, 7 June 23