
ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ಕಳೆದ ವಾರ (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಸಹ ಆಗಿಬಿಟ್ಟಿತ್ತು. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಗಳು ಅನುಮತಿ ಸಹ ನೀಡಿದ್ದವು. ಅಭಿಮಾನಿಗಳು ಸಹ ಚಿತ್ರಮಂದಿರಗಳನ್ನು ಸಿಂಗರಿಸಿ ಬಾಲಯ್ಯನ ಹೊಸ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಸಿನಿಮಾದ ಬಿಡುಗಡೆಯನ್ನು ರದ್ದು ಮಾಡಲಾಗಿತ್ತು. ಇದೀಗ ನ್ಯಾಯಾಲಯದಿಂದ ‘ಅಖಂಡ 2’ ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.
‘ಅಖಂಡ 2’ ಸಿನಿಮಾ ನಿರ್ಮಿಸಿದ್ದ 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ಸಂಸ್ಥೆಯ ಮೇಲೆ ಸುಮಾರು 10 ವರ್ಷಗಳ ಹಿಂದಿನ ಹಣಕಾಸು ವಿವಾದದ ಕುರಿತಾಗಿ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಯು ದಾವೆ ಹೂಡಿತ್ತು. ಈ ಕುರಿತಾಗಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ನಿರ್ಮಾಣ ಮಾಡಿರುವ ‘ಅಖಂಡ 2’ ಸಿನಿಮಾದ ಬಿಡುಗಡೆಗೆ ತಡೆ ನೀಡಿತ್ತು. ಆದರೆ ಈಗ ನ್ಯಾಯಾಲಯವು ಸಿನಿಮಾದ ಬಿಡುಗಡೆಗೆ ನೀಡಿದ್ದ ತಡೆಯನ್ನು ತೆಗೆದಿದೆ.
ಇದನ್ನೂ ಓದಿ:‘ಅಖಂಡ 2’ ರಿಲೀಸ್ ರದ್ದಾಗಲು ನಿಜ ಕಾರಣವೇನು?
ಈಗ ಹರಿದಾಡುತ್ತಿರುವ ಸುದ್ದಿಯಂತೆ 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಸಂಸ್ಥೆಯು ಇರೋಸ್ಗೆ ಬಾಕಿ ಚುಕ್ತಾ ಮಾಡಿ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಇಂದು ನ್ಯಾಯಾಲಯವು ‘ಅಖಂಡ 2’ ಸಿನಿಮಾದ ಬಿಡಗಡೆಗೆ ವಿಧಿಸಿದ್ದ ತಡೆಯನ್ನು ತೆರವು ಮಾಡಿದೆ. ಹಾಗಾಗಿ ‘ಅಖಂಡ 2’ ಸಿನಿಮಾ ಡಿಸೆಂಬರ್ 12 ರಂದು ಅಂದರೆ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಈ ಬಗ್ಗೆ ಈಗಾಗಲೇ ಕೆಲವಾರು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ನಿರ್ಮಾಣ ಸಂಸ್ಥೆಯ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ಡಿಸೆಂಬರ್ 5 ರಂದು ‘ಅಖಂಡ 2’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಡಿಸೆಂಬರ್ 4ರಂದೇ ಬೆಂಗಳೂರು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ಮುಂಗಡವಾಗಿ ಸಿನಿಮಾ ಟಿಕೆಟ್ಗಳನ್ನು ಮಾರಾಟ ಸಹ ಮಾಡಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸಿನಿಮಾ ರದ್ದಾಯಿತು. ಇದು ಬಾಲಕೃಷ್ಣ ಅಭಿಮಾನಿಗಳಿಗೆ ಭಾರಿ ಬೇಸರ ತಂದಿತ್ತು. ನಿರ್ಮಾಣ ಸಂಸ್ಥೆಯ ವಿರುದ್ಧ ಬಾಲಯ್ಯ ಅಭಿಮಾನಿಗಳು ಹರಿಹಾಯ್ದಿದ್ದರು. ಆದರೆ ಇದೀಗ ಒಂದೇ ವಾರದಲ್ಲಿ ನಿರ್ಮಾಣ ಸಂಸ್ಥೆಯು ವಿವಾದವನ್ನು ಬಗೆಹರಿಸಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ