
ಸುಖೇಶ್ ಚಂದ್ರಶೇಖರ್ (Sukhesh Chandrashekhar), ಭಾರತದ ನಂಬರ್ ಕಾನ್ಮ್ಯಾನ್ (ಮೋಸಗಾರ) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ದೇಶದ ಕೆಲವು ಪ್ರಮುಖ ರಾಜಕಾರಣಿಗಳು, ವಿಐಪಿ ವ್ಯಕ್ತಿಗಳು, ಖ್ಯಾತ ಉದ್ಯಮಿಗಳು, ಚಿತ್ರರಂಗದ ಕೆಲವರಿಗೆ ಸಹ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾನೆ ಈ ಆಸಾಮಿ. ಬಾಲಿವುಡ್ ನಟಿಯರ ಮೇಲೆ ವಿಶೇಷ ಮೋಹ ಹೊಂದಿದ್ದ ಸುಖೇಶ್, ತನ್ನ ಮೋಸದ ಹಣದ ನೆರವಿನಿಂದ ಹಲವು ನಟಿಯರಿಗೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ನೀಡುತ್ತಿದ್ದ. ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಗರ್ಲ್ಫ್ರೆಂಡ್ ಸಹ ಮಾಡಿಕೊಂಡಿದ್ದ. ಇದೀಗ ಈತ ಜೈಲಿನಲ್ಲಿದ್ದು, ಜೈಲಿನಲ್ಲಿದ್ದುಕೊಂಡೇ ತಾನು ಜಾಕ್ವೆಲಿನ್ ಫರ್ನಾಂಡೀಸ್ಗೆ ದುಬಾರಿ ಉಡುಗೊರೆ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾನೆ.
ವಿಶ್ವದ ಟಾಪ್ ಶ್ರೀಮಂತರು, ಹಾಲಿವುಡ್ ಸೂಪರ್ ಸ್ಟಾರ್ಗಳು ನೆಲೆಸಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿ ತಾವು ಜಾಕ್ವೆಲಿನ್ಗೆ ದುಬಾರಿ ಮನೆಯೊಂದನ್ನು ಕ್ರಿಸ್ಮಸ್ ಉಡುಗೊರೆಯಾಗಿ ನೀಡಿರುವುದಾಗಿ ಸುಖೇಶ್ ಹೇಳಿಕೊಂಡಿದ್ದಾನೆ. ಜೈಲಿಂದ ಪತ್ರ ಬರೆದಿರುವ ಸುಖೇಶ್, ಜಾಕ್ವೆಲಿನ್ಗೆ ಲವ್ ನೆಸ್ಟ್ (ಪ್ರೀತಿಯ ಗೂಡು) ನೀಡಿರುವುದಾಗಿ ಹೇಳಿಕೊಂಡಿದ್ದಾನೆ.
‘ನಿನಗಾಗಿ ನಾನು ಖರೀದಿಸಿದ್ದ ದುಬಾರಿ ಪ್ರಾಪರ್ಟಿ, ಈ ಮನೆ ನಿರ್ಮಾಣ ಪೂರ್ಣ ಆಗುವುದಿಲ್ಲ ಎಂದು ನೀನು ಅಂದುಕೊಂಡಿದ್ದ ಅದೇ ಪ್ರಾಪರ್ಟಿ ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಇದು ನಮ್ಮ ಮನೆ ಆಗಲಿದೆ. ಇದನ್ನು ಈ ಕ್ರಿಸ್ಮಸ್ಗೆ ನಿನಗಾಗಿ ಉಡುಗೊರೆ ನೀಡುತ್ತಿದ್ದೇನೆ’ ಎಂದು ಸುಖೇಶ್ ಚಂದ್ರಶೇಖರ್ ಪತ್ರದಲ್ಲಿ ಹೇಳಿದ್ದಾನೆ. ‘ಈ ಮೊದಲು ನಾವು ಯೋಜನೆ ಹಾಕಿದ್ದಕ್ಕಿಂತಲೂ ದೊಡ್ಡದಾಗಿದೆ ನಮ್ಮ ಈ ಪ್ರಾಪರ್ಟಿ. ನಮ್ಮ ಈ ಹೊಸ ಮನೆಯ ಸುತ್ತ ದೊಡ್ಡ ಗಾಲ್ಫ್ ಕೋರ್ಸ್ ಸಹ ಇದೆ’ ಎಂದಿದ್ದಾನೆ.
ಇದನ್ನೂ ಓದಿ:ಮಹಾ ವಂಚಕ ಸುಖೇಶ್ ಕುರಿತ ಡಾಕ್ಯುಮೆಂಟರಿ, ನಟಿಯಿಂದ ತಕರಾರು?
‘ನಿನ್ನ ಮತ್ತೊಂದು ಆಸೆಯನ್ನು ಪೂರೈಸುವ ಪ್ರಯತ್ನದಲ್ಲಿ ನಾನು ಇದ್ದೀನೆ. ಒಂದು ಐಪಿಎಲ್ ತಂಡದ ಒಡತಿ ಆಗಬೇಕು ಎಂಬುದು ನಿನ್ನ ಆಸೆ ಆಗಿತ್ತು. ನಾನು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದಷ್ಟು ಬೇಗ ಆ ಸರ್ಪ್ರೈಸ್ ಅನ್ನು ಸಹ ನಾನು ನಿನಗೆ ನೀಡಲಿದ್ದೇನೆ’ ಎಂದಿದ್ದಾನೆ ಸುಖೇಶ್.
ಆದರೆ ಸುಖೇಶ್ ಬರೆದಿರುವ ವಿಷಯಗಳು ಸತ್ಯವೊ, ಸುಳ್ಳೊ ತಿಳಿಯದು. ಸುಖೇಶ್ಗೆ ಸೇರಿದ ಆಸ್ತಿ, ಕಾರುಗಳು ಬ್ಯಾಂಕ್ ಖಾತೆಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಸುಖೇಶ್ಗೆ ಈ ಹಿಂದೆ ಜೈಲಿನಲ್ಲಿ ನೀಡಲಾಗಿದ್ದ ಎಲ್ಲ ವಿಶೇಷ ಸವಲತ್ತುಗಳನ್ನು ರದ್ದು ಮಾಡಲಾಗಿದೆ. ಆದರೆ ಅದು ಹೇಗೆ ಈತ ಜೈಲಿನಲ್ಲಿದ್ದುಕೊಂಡು ಬೆವರ್ಲಿ ಹಿಲ್ನಲ್ಲಿ ಮನೆ ಕಟ್ಟಿಸಿದ ಎಂಬುದು ಅನುಮಾನ.
ಸುಖೇಶ್, ಹಲವು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿದ್ದುಕೊಂಡೇ ಹಲವು ವಿಐಪಿಗಳಿಗೆ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ್ದ. ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ದುಬಾರಿ ಕಾರುಗಳು, ಮನೆಗಳನ್ನು ಉಡುಗೊರೆಯಾಗಿ ನೀಡಿದ್ದ. ಜಾಕ್ವೆಲಿನ್ ಜೊತೆಗೆ ಅತ್ಯಾಪ್ತ ಸಂಬಂಧವನ್ನು ಸುಖೇಶ್ ಹೊಂದಿದ್ದ. ಸುಖೇಶ್ ಜೊತೆಗೆ ಜಾಕ್ವೆಲಿನ್ ಆಪ್ತವಾಗಿರುವ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಸುಖೇಶ್ನ ವಂಚನೆ ಪ್ರಕರಣದ ತನಿಖಾಧಿಕಾರಿಗಳು ಜಾಕ್ವೆಲಿನ್ ವಿರುದ್ಧವೂ ಎಫ್ಐಆರ್ ದಾಖಲಿಸದ್ದು, ವಿಚಾರಣೆ ಚಾಲ್ತಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ