ಚಿತ್ರರಂಗ ಎಲ್ಲರನ್ನೂ ಆಕರ್ಷಿಸುತ್ತದೆ. ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಬಂದು ಮೋಸ ಹೋದ ಉದಾಹರಣೆ ಸಾಕಷ್ಟು ಇದೆ. ಈಗ ತೆಲುಗು ನಟಿ ಸುನಿತಾ ಬೋಯಾ (Sunitha Boya) ಅವರು ತಮಗೆ ಮೋಸ ಆಗಿದೆ ಎಂದು ಆರೋಪಿಸಿ ಖ್ಯಾತ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ನ (Geetha Arts) ಹೈದರಾಬಾದ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಅವರು ಈ ರೀತಿ ಪ್ರತಿಭಟನೆ ಮಾಡಿದ್ದು ಇದೇ ಮೊದಲೇನು ಅಲ್ಲ. ಈ ಹಿಂದೆ ಹಲವು ಬಾರಿ ಅರೆ ಬೆತ್ತಲಾಗಿ ಪ್ರೊಟೆಸ್ಟ್ ಮಾಡಿದ್ದರು.
ನಿರ್ಮಾಪಕ ಬನ್ನಿ ವಾಸು ಅವರಿಂದ ಮೋಸ ಆಗಿದೆ ಎಂಬುದು ಸುನಿತಾ ಅವರ ಆರೋಪ. ಅಲ್ಲು ಕುಟುಂಬದ ಜತೆ ಬನ್ನಿ ವಾಸು ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಕಚೇರಿ ಎದುರು ಸುನಿತಾ ಗುರುವಾರ ರಾತ್ರಿ (ನವೆಂಬರ್ 17) ಬೆತ್ತಲಾಗಿ ಪ್ರತಿಭಟನೆ ಮಾಡಿದ್ದಾರೆ.
ಸುನಿತಾ ಹಲವು ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಬನ್ನಿ ವಾಸು ನಿರ್ಮಾಣದ ಕೆಲ ಸಿನಿಮಾಗಳಲ್ಲಿ ಸುನೀತಾ ನಟಿಸಿದ್ದರು. ಅವರು ಸರಿಯಾಗಿ ಸಂಭಾವನೆ ನೀಡಿಲ್ಲ ಎಂದು ನಟಿ ಆರೋಪಿಸುತ್ತಾ ಬಂದಿದ್ದಾರೆ. ಮಾನಸಿಕವಾಗಿ ಕುಗ್ಗಲು ಬನ್ನಿ ವಾಸು ಕಾರಣ ಎಂದು ನಟಿ ದೂರಿದ್ದಾರೆ. ಆದರೆ, ಯಾರಿಂದಲೂ ಸರಿಯಾಗಿ ಪ್ರತಿಕ್ರಿಯೆ ಸಿಗದ ಕಾರಣ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.
ಮೀ ಟೂ ಅಭಿಯಾನ ಶುರುವಾದಾಗ ನಟಿ ಶ್ರೀ ರೆಡ್ಡಿ ಕೂಡ ಇದೇ ರೀತಿ ಬೆತ್ತಲೆ ಪ್ರತಿಭಟನೆ ಮಾಡಿ ಸಂಚಲನ ಸೃಷ್ಟಿ ಮಾಡಿದ್ದರು. ತಮಗೆ ಅನೇಕರಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಅವರು ಹೇಳಿದ್ದರು. ಈಗ ಸುನಿತಾ ಬೋಯಾ ಅವರ ಪ್ರತಿಭಟನೆ ಶ್ರೀ ರೆಡ್ಡಿ ಅವರ ಪ್ರತಿಭಟನೆಯನ್ನು ನೆನಪಿಸಿದೆ.
ಇದನ್ನೂ ಓದಿ: ‘ನಮ್ಮ ಬ್ಯಾನರ್ನಲ್ಲಿ ಸಿನಿಮಾ ಮಾಡಿ’; ಅಲ್ಲು ಅರ್ಜುನ್ ತಂದೆ ಕೋರಿಕೆಗೆ ತಕ್ಷಣ ಒಪ್ಪಿದ ರಿಷಬ್ ಶೆಟ್ಟಿ
ಬನ್ನಿ ವಾಸು ಅವರು ಗೀತಾ ಆರ್ಟ್ಸ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬದ ಜತೆ ಒಳ್ಳೆಯ ನಂಟು ಹೊಂದಿದ್ದರಿಂದ ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಬೆಳೆಯಲು ಸಹಾಯ ಆಯಿತು ಎನ್ನಲಾಗಿದೆ. ಸದ್ಯ ಅವರು ಈ ಪ್ರಕರಣದಲ್ಲಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.