‘ಗದರ್ 2’ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದುಕೊಂಡಿದೆ. ನಟ ಸನ್ನಿ ಡಿಯೋಲ್ಗೆ ಬಹು ಕಾಲದ ನಂತರ ಭರ್ಜರಿ ಯಶಸ್ಸು ದೊರೆತಿದೆ. ಅವರು ಗೆಲುವಿನ ಖುಷಿಯಲ್ಲಿದ್ದಾರೆ. ಶಾರುಖ್ ಖಾನ್ ಜೊತೆ ಇದ್ದ ವೈಮನಸ್ಸಿನ ಬಗ್ಗೆ ಸನ್ನಿ ಡಿಯೋಲ್ ಮುಕ್ತವಾಗಿ ಮಾತನಾಡಿದ್ದಾರೆ. ಬಹುಕಾಲದಿಂದ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ನಂತರ ಹೇಗೆ ಎಲ್ಲವನ್ನು ಸರಿಪಡಿಸಿಕೊಂಡರು ಎಂಬುದನ್ನು ಅವರು ವಿವರಿಸಿದ್ದಾರೆ. ಶಾರುಖ್ (Shah Rukh Khan) ಮತ್ತು ಸನ್ನಿ ಬರೋಬ್ಬರಿ 16 ವರ್ಷಗಳಿಂದ ಮಾತನಾಡುತ್ತಿರಲಿಲ್ಲ. ‘ಡರ್’ ಸಿನಿಮಾದಿಂದ ಆರಂಭವಾದ ವೈಮನಸ್ಸು ಈಗ ಮುಕ್ತಾಯಗೊಂಡಿದೆ. ಸದ್ಯ ಇಬ್ಬರ ಮಧ್ಯೆ ಎಲ್ಲವೂ ಸರಿ ಆಗಿದೆ.
‘ಗದರ್ 2’ ಚಿತ್ರವನ್ನು ನೋಡಿದ ಶಾರುಖ್, ಸನ್ನಿ ಡಿಯೋಲ್ಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಯಶಸ್ಸಿಗೆ ಸನ್ನಿ ಅರ್ಹ ಎಂದು ತಿಳಿಸಿದ್ದಾರಂತೆ. ಅಷ್ಟೇ ಅಲ್ಲದೆ ಶಾರುಖ್ ಪತ್ನಿ ಗೌರಿ ಖಾನ್, ಪುತ್ರ ಆರ್ಯನ್ ಖಾನ್ ಜೊತೆಯೂ ಸನ್ನಿ ಮಾತನಾಡಿದ್ದರು. ಅವರು ಶೀಘ್ರವೇ ಸಿನಿಮಾ ನೋಡಲಿದ್ದೇವೆ ಎಂದಿದ್ದರು. ಬಳಿಕ ‘ಗದರ್ 2’ ಸಿನಿಮಾ ನೋಡಿ ಶಾರುಖ್ ಟ್ವೀಟ್ ಕೂಡ ಮಾಡಿದ್ದರು.
‘ಇದೆಲ್ಲವೂ ಸುಂದರವಾಗಿತ್ತು. ನಾವು ಹಲವು ಬಾರಿ ಕರೆ ಮಾಡಿ ಹಲವು ವಿಷಯಗಳ ಬಗ್ಗೆ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ. ಹಿಂದಿನ ಸಮಸ್ಯೆಗಳೇನೇ ಇದ್ದರೂ ಸಮಯ ಎಲ್ಲವನ್ನೂ ಗುಣಪಡಿಸುತ್ತದೆ. ನಾವು ಮುಂದುವರೆಯಲೇಬೇಕು. ಜೀವನ ಹೀಗೆಯೇ ಇರಬೇಕು’ ಎಂದು ಸನ್ನಿ ಡಿಯೋಲ್ ಅವರು ಹೇಳಿದ್ದಾರೆ.
ಸನ್ನಿ ಮತ್ತು ಶಾರುಖ್ ‘ಡರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಹೀರೋ ಆಗಿದ್ದರು. ಶಾರುಖ್ ವಿಲನ್ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರವನ್ನು ಹೈಲೈಟ್ ಮಾಡಲಾಯಿತು. ಈ ಬಗ್ಗೆ ಸನ್ನಿ ಡಿಯೋಲ್ ಅಸಮಾಧಾನಗೊಂಡಿದ್ದರು. ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಸನ್ನಿ ಡಿಯೋಲ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಜನರು ಚಿತ್ರವನ್ನು ಇಷ್ಟಪಟ್ಟರು ಎಂಬುದಷ್ಟೇ ನಮಗೆ ಬೇಕಾಗಿರುವುದು. ಈ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರವನ್ನು ಜನರು ಮೆಚ್ಚಿಕೊಂಡರು. ನನಗೆ ವಿಲನ್ ಪಾತ್ರವನ್ನು ವೈಭವೀಕರಿಸಲಾಗುತ್ತದೆ ಎಂಬುದು ಗೊತ್ತಿರಲಿಲ್ಲ. ನಾನು ಯಾವಾಗಲೂ ಮುಕ್ತ ಮನಸ್ಸಿನಿಂದ ಕೆಲಸ ಮಾಡುತ್ತೇನೆ ಮತ್ತು ಜನರನ್ನು ನಂಬುತ್ತೇನೆ. ನಂಬಿಕೆಯ ಮೇಲೆ ನಾನು ಕೆಲಸ ಮಾಡುತ್ತೇನೆ. ಆದರೆ, ದುರಾದೃಷ್ಟ ಎಂದರೆ ಎಲ್ಲರೂ ಇದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಬಹುಶಃ ಅವರು ಸ್ಟಾರ್ಡಂನ ಹೀಗೆ ಪಡೆಯಬಹುದು’ ಎಂದು ಹೇಳಿದ್ದರು. ಆ ಬಳಿಕ ಶಾರುಖ್ ಖಾನ್ ಹಾಗೂ ಸನ್ನಿ ಮಧ್ಯೆ ವೈಮನಸ್ಸು ಮೂಡಿತು.
ಇದನ್ನೂ ಓದಿ: ಶಾರುಖ್ ಖಾನ್ ನಿವಾಸದ ಎದುರು ಭಾರೀ ಪ್ರತಿಭಟನೆ; ಮನ್ನತ್ಗೆ ಬಿಗಿ ಭದ್ರತೆ ನೀಡಿದ ಪೊಲೀಸರು
‘ಗದರ್ 2’ ಸಿನಿಮಾ 450 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ 450 ಕೋಟಿ ರೂ. ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೊದಲು ‘ಪಠಾಣ್’ ಸಿನಿಮಾ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ