AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಂಗುವ’ ಮುಗಿಸಿ, ಹೊಸ ಸಿನಿಮಾ ಪ್ರಾರಂಭಿಸಿದ ಸೂರ್ಯ

ತಮಿಳಿನ ಜನಪ್ರಿಯ ನಟ ಸೂರ್ಯ, ಬಹು ಬಜೆಟ್ ಸಿನಿಮಾ ‘ಕಂಗುವ’ ಮುಗಿಸಿದ್ದಾರೆ. ಆ ಸಿನಿಮಾ ಬಿಡುಗಡೆ ಆಗುವ ಮುನ್ನ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸೂರ್ಯ ಹೊಸ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದು, ಪೂಜಾ ಹೆಗ್ಡೆ ನಾಯಕಿ.

‘ಕಂಗುವ’ ಮುಗಿಸಿ, ಹೊಸ ಸಿನಿಮಾ ಪ್ರಾರಂಭಿಸಿದ ಸೂರ್ಯ
ಮಂಜುನಾಥ ಸಿ.
|

Updated on: Jun 02, 2024 | 7:50 AM

Share

ತಮಿಳಿನ ಸ್ಟಾರ್ ನಟ ಸೂರ್ಯ (Suriya) ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಮಾಸ್ ನಾಯಕ ನಟನಾಗಿದ್ದರೂ ಸಹ ಸಿನಿಮಾಗಳಲ್ಲಿ, ತಮ್ಮ ಪಾತ್ರಗಳಲ್ಲಿ ಭಿನ್ನತೆ ಇರುವಂತೆ ನೋಡಿಕೊಳ್ಳುವ ಸೂರ್ಯ ಇತ್ತೀಚೆಗಷ್ಟೆ ‘ಕಂಗುವ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಹೊಸ ಸಿನಿಮಾವು ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗಿಂತಲೂ ಹೆಚ್ಚು ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಹ ಸೂರ್ಯ ಸಲ್ಲಿಸಿದ್ದಾರೆ.

ಸೂರ್ಯ ಇದೀಗ ತಮ್ಮ 44ನೇ ಸಿನಿಮಾದಲ್ಲಿ ನಟಿಸಲಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಕಾರ್ತಿಕ್ ಸುಬ್ಬರಾಜು, ತಮ್ಮ ಭಿನ್ನ ಮಾದರಿಯ ಕಥನ ಶೈಲಿ, ನಿರೂಪಣಾ ಶೈಲಿಯಿಂದ ಪ್ರಸಿದ್ಧರು, ತಮ್ಮದೇ ಆದ ಅಭಿಮಾನಿ ವರ್ಗವನ್ನು ಕಾರ್ತಿಕ್ ಹೊಂದಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:Shivarajkumar: ತಮಿಳು ಸಿನಿಮಾಗೆ ಶಿವಣ್ಣ ಸಾಥ್; ಈ ಚಿತ್ರದಲ್ಲಿದೆ ರೆಟ್ರೋ ಕಥೆ  

ಸೂರ್ಯ ನಟಿಸಲಿರುವ ಈ ಹೊಸ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿ. ಈ ಸಿನಿಮಾ ಮೂಲಕ ಪೂಜಾ ಹೆಗ್ಡೆ ಮತ್ತೆ ತಮಿಳು ಚಿತ್ರ ರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ. 2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ. ಸೂರ್ಯ ಜೊತೆಗೆ ಇದು ಅವರ ಮೊದಲ ಸಿನಿಮಾ ಸಹ.

ಸೂರ್ಯ ಇತ್ತೀಚೆಗಷ್ಟೆ ‘ಕಂಗುವ’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಈ ಸಿನಿಮಾ ನೂರಾರು ವರ್ಷಗಳ ಹಿಂದಿನ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಬಾಬಿ ಡಿಯೋಲ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ದಿಶಾ ಪಟಾನಿ ಈ ಸಿನಿಮಾದ ನಾಯಕಿಯಾಗಿದ್ದು, ಅವರಿಗೂ ಸಹ ಇದು ಮೊದಲ ತಮಿಳು ಸಿನಿಮಾ. ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು, ಸಂಗೀತವನ್ನು ದೇವಿ ಶ್ರೀ ಪ್ರಸಾದ್ ನೀಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಿಸಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ