AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಮಾಡಿದ್ದ 25 ಸಾವಿರ ರೂಪಾಯಿ ಸಾಲ ತೀರಿಸಲು ನಟನಾದೆ: ಸೂರ್ಯ

ಖ್ಯಾತ ನಟ ಸೂರ್ಯ ಅವರು ನಟನಾಗುವ ಉದ್ದೇಶವನ್ನೇ ಹೊಂದಿರಲಿಲ್ಲ. ಗಾರ್ಮೆಂಟ್ಸ್​ ಇಂಡಸ್ಟ್ರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆದರೆ ತಾಯಿ ಮಾಡಿದ್ದ ಸಾಲವನ್ನು ತೀರಿಸಬೇಕು ಎಂಬ ಅನಿವಾರ್ಯ ಕಾರಣದಿಂದ ಅವರು ನಟನಾಗಲು ನಿರ್ಧರಿಸಿದರು. ಈಗ ಅವರ ‘ಕಂಗುವ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ.

ತಾಯಿ ಮಾಡಿದ್ದ 25 ಸಾವಿರ ರೂಪಾಯಿ ಸಾಲ ತೀರಿಸಲು ನಟನಾದೆ: ಸೂರ್ಯ
ಸೂರ್ಯ, ಶಿವಕುಮಾರ್​, ಲಕ್ಷ್ಮಿ
ಮದನ್​ ಕುಮಾರ್​
|

Updated on: Oct 24, 2024 | 6:05 PM

Share

ಕಾಲಿವುಡ್​ ನಟ ಸೂರ್ಯ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಇರುವ ಅನುಭವ ಅಪಾರ. ಅನೇಕ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನಿರ್ಮಾಣ ಸಂಸ್ಥೆಯನ್ನೂ ಸೂರ್ಯ ಅವರು ಹೊಂದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅವರಿಗೆ ನಟನಾಗಬೇಕು ಎಂಬ ಆಸೆಯೇ ಇರಲಿಲ್ಲ! ಹೌದು, ಅಚ್ಚರಿ ಎನಿಸಿದರೂ ಕೂಡ ಇದು ಸತ್ಯ. ಅವರು ನಟನಾಗಿದ್ದು ಆಕಸ್ಮಿಕವಾಗಿ. ಅದು ಕೂಡ ತಾಯಿಯ ಸಾಲ ತೀರಿಸುವ ಸಲುವಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು ಎಂಬುದು ಅನೇಕರಿಗೆ ತಿಳಿದಿಲ್ಲ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೂರ್ಯ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಟನಾಗುವುದಕ್ಕೂ ಮುನ್ನ ಸೂರ್ಯ ಅವರು ಗಾರ್ಮೆಂಟ್ಸ್​ ಕಂಪನಿಯಲ್ಲಿ ತರಬೇತಿ ಪಡೆಯುತ್ತಾ, ಕೆಲಸ ಮಾಡುತ್ತಿದ್ದರು. 15 ದಿನಕ್ಕೆ ಅವರಿಗೆ 750 ರೂಪಾಯಿ ಸಂಪಾದನೆ ಆಗುತ್ತಿತ್ತು. ಅಲ್ಲೇ ಕೆಲಸ ಮುಂದುವರಿಸಿದ್ದರೆ ಮೂರು ವರ್ಷದ ಬಳಿಕ ಅವರಿಗೆ ಪ್ರತಿ ತಿಂಗಳು 8 ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ಮುಂದೊಂದು ದಿನ ತಮ್ಮದೇ ಸ್ವಂತ ಕಂಪನಿ ಶುರು ಮಾಡಬೇಕು ಎಂಬುದು ಅವರ ಆಲೋಚನೆ ಆಗಿತ್ತು. ಆದರೆ ಆಗಿದ್ದೇ ಬೇರೆ.

ಸೂರ್ಯ ಅವರ ತಂದೆ ಶಿವಕುಮಾರ್​ ಕೂಡ ನಟನಾಗಿದ್ದರು. ಶಿವಕುಮಾರ್​ ಅವರಿಗೆ ತಿಳಿಯದಂತೆಯೇ ತಾಯಿ ಲಕ್ಷ್ಮಿ ಅವರು 25 ಸಾವಿರ ರೂಪಾಯಿ ಸಾಲ ತೆಗೆದುಕೊಂಡಿದ್ದರು. 90ರ ದಶಕದಲ್ಲಿ ಅದು ದೊಡ್ಡ ಮೊತ್ತ. ಆ ಸಾಲವನ್ನು ತೀರಿಸಬೇಕು ಎಂಬ ಉದ್ದೇಶದೊಂದಿಗೆ ಸೂರ್ಯ ಅವರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರು. 1997ರಲ್ಲಿ ಬಿಡುಗಡೆಯಾದ ‘ನೇರುಕ್ಕು ನೇರ್’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು.

‘ಚಿತ್ರರಂಗಕ್ಕೆ ಬರುತ್ತೇನೆ ಎಂದು ನಾನು ಯಾವತ್ತೂ ಆಲೋಚಿಸಿರಲಿಲ್ಲ. ಕ್ಯಾಮೆರಾ ಎದುರು ನಿಲ್ಲಬೇಕು ಅಥವಾ ನಟನಾಗಬೇಕು ಎಂಬ ಆಸೆಯೇ ನನಗೆ ಇರಲಿಲ್ಲ. ಅಮ್ಮನಿಗೆ 25 ಸಾವಿರ ರೂಪಾಯಿ ನೀಡಿ, ನಿಮ್ಮ ಸಾಲ ತೀರಿತು, ನೀವಿನ್ನು ಚಿಂತೆ ಮಾಡುವುದು ಬೇಡ ಅಂತ ಹೇಳಬೇಕು ಎಂಬ ಕಾರಣದಿಂದ ನಾನು ಚಿತ್ರರಂಗಕ್ಕೆ ಬಂದೆ. ಹೀಗೆ ನಾನು ನಟನಾ ವೃತ್ತಿ ಶುರು ಮಾಡಿದೆ’ ಎಂದು ಸೂರ್ಯ ಹೇಳಿದ್ದಾರೆ.

ಮುಂಬೈನಲ್ಲಿ ಲಕ್ಷುರಿ ಫ್ಲ್ಯಾಟ್, ದುಬಾರಿ ಕಾರು; ನಟ ಸೂರ್ಯ ಐಷಾರಾಮಿ ಜೀವನ

ಸೂರ್ಯ ನಟನೆಯ ‘ಕಂಗುವಾ’ ಸಿನಿಮಾ ನವೆಂಬರ್​ 14ರಂದು ಬಿಡುಗಡೆ ಆಗಲಿದೆ. ತಮಿಳಿನ ಈ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿದೆ. ಬಾಲಿವುಡ್ ನಟರಾದ ಬಾಬಿ ಡಿಯೋಲ್, ದಿಶಾ ಪಟಾನಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸೂರ್ಯ ಅವರಿಗೆ ಈ ಚಿತ್ರದಲ್ಲಿ ವಿಶೇಷ ಗೆಟಪ್​ ಇದೆ. ಆ ಕಾರಣದಿಂದ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.